ಬನವಾಸಿ ಬಳಗ

ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಕನ್ನಡ ದೇಶಮಂ

ಯೋಜನೆಗಳು

ಬನವಾಸಿ ಬಳಗ ಹಲವು ಯೋಜನೆಗಳನ್ನು ಹಮ್ಮಿಕೊಂಡು ಕೆಲಸ ಮಾಡುತ್ತಿದೆ. ಅವುಗಳ ವಿವರ ಈ ಕೆಳಗಿನಂತಿದೆ.

ಕನ್ನಡತನದ ಜಾಗೃತಿ

ಕನ್ನಡಿಗರಲ್ಲಿ ಕನ್ನಡತನದ, ತನ್ನತನದ ಜಾಗೃತಿ ಮೂಡಿಸುವತ್ತ ಬನವಾಸಿ ಬಳಗ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದೆ. ಈ ದಿಕ್ಕಿನಲ್ಲಿ ನಮ್ಮ ಯೋಜನೆಗಳು ಇಂತಿವೆ.

“ಏನ್ ಗುರು ಕಾಫಿ ಆಯ್ತಾ?” ಬ್ಲಾಗ್
ಕನ್ನಡ, ಕರ್ನಾಟಕ, ಕನ್ನಡಿಗರ ಪರ, ಏಳಿಗೆಯ ಪರವಾದ ಚಿಂತನೆಗಳನ್ನು ಏನ್ ಗುರು…ಕಾಫಿ ಆಯ್ತಾ? ಎನ್ನುವ ಬ್ಲಾಗ್ ಮೂಲಕ ನಿಯಮಿತವಾಗಿ ಅಂಕಣಗಳ ಮೂಲಕ ಬನವಾಸಿ ಬಳಗ ಪ್ರತಿಪಾದಿಸುತ್ತಾ ಬಂದಿದೆ. 2007ರಲ್ಲಿ ಶುರುವಾದ ಈ ಬ್ಲಾಗ್ ಈವರೆಗೆ 650ಕ್ಕೂ ಹೆಚ್ಚು ಅಂಕಣಗಳನ್ನು ಹೊರ ತಂದಿದ್ದು ಜಗತ್ತಿನ 120ಕ್ಕೂ ಹೆಚ್ಚು ದೇಶಗಳ ಕನ್ನಡಿಗರನ್ನು ತಲುಪುವ ಮೂಲಕ ಕನ್ನಡದ ಅತ್ಯಂತ ಜನಪ್ರಿಯ ಬ್ಲಾಗ್ ಗಳಲ್ಲಿ ಒಂದಾಗಿದೆ.ಈ ಚಿಂತನೆಯ ಹಣತೆಗಳು ಈಗಾಗಲೆ ಹಲವು ರೀತಿಗಳಲ್ಲಿ ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ ಮೂಡಿಸಿರುವುದರ ಜೊತೆಗೆ ನಮ್ಮ ಸುತ್ತಲಿನ ಜಗತ್ತನ್ನು ನೋಡಬೇಕಾದ ಕಣ್ಣುಗಳಿಗಂಟಿದ ನಾನಾ ಅಸಹಜ ಪರದೆಗಳನ್ನು ಕಿತ್ತೊಗೆಯಲು ಸಹಾಯಕವಾಗಿದೆ.

“ಏನ್ ಗುರು” ಬ್ಲಾಗ್ ನೋಡಲು ಭೇಟಿ ಕೊಡಿ:
http://enguru.blogspot.in/

“ಏನ್ ಗುರು ಕಾಫಿ ಆಯ್ತಾ?” ಹೊತ್ತಗೆ
ಬ್ಲಾಗ್ ಬರಹ ಎನ್ನುವುದು ಅಂತರ್ಜಾಲಿಗರನ್ನು ಮಾತ್ರಾ ತಲುಪುವಲ್ಲಿ ಸೀಮಿತವಾಗಿರುವುದನ್ನು ಮನಗಂಡು ಹೆಚ್ಚು ಹೆಚ್ಚು ಕನ್ನಡಿಗರಲ್ಲಿ ಕನ್ನಡ ಜಾಗೃತಿ, ಚಿಂತನೆಯನ್ನು ಹರಡುವ ಉದ್ದೇಶದಿಂದ ಏನ್ ಗುರು ಬ್ಲಾಗ್ ನಲ್ಲಿ ಬಂದ ಆಯ್ದ ಅಂಕಣಗಳನ್ನು ಸೇರಿಸಿ “ಏನ್ ಗುರು ಕಾಫಿ ಆಯ್ತಾ” ಅನ್ನುವ ಹೆಸರಿನಲ್ಲಿ ಎರಡು ಭಾಗದ ಹೊತ್ತಗೆಗಳನ್ನು ಹೊರ ತಂದಿದ್ದೇವೆ. ಈ ಹೊತ್ತಗೆಗಳನ್ನು ಕನ್ನಡ ನಾಡಿನ ಚಿಂತಕರು, ಸಾಹಿತಿಗಳಿಗೂ ತಲುಪಿಸಿದ್ದೇವೆ. ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಹೊತ್ತಗೆಗೆ ಹಿಂದೆಂದೂ ಕಂಡಿರದ ಪ್ರತಿಕ್ರಿಯೆ ವ್ಯಕ್ತವಾಗಿ ಮೂರೇ ದಿನದಲ್ಲಿ ಸಾವಿರ ಪ್ರತಿಗಳನ್ನು ಮಾರಾಟ ಮಾಡಿದ ಗರಿಮೆ ಈ ಹೊತ್ತಗೆಗಿದೆ.

“ಏನ್ ಗುರು ಕಾಫಿ ಆಯ್ತಾ?” ಹೊತ್ತಗೆ ಮಾರುಕಟ್ಟೆಯಲ್ಲಿ ಎಲ್ಲೆಲ್ಲಿ ದೊರಕುತ್ತದೆ ಅನ್ನುವ ಬಗ್ಗೆ ತಿಳಿಯಲು ಭೇಟಿ ಕೊಡಿ:
http://enguru.blogspot.in/2011/03/en-guru-hottage-maarukatteyalli.html

“ಏನ್ ಗುರು ಕಾಫಿ ಆಯ್ತಾ?” ಹೊತ್ತಗೆಯನ್ನು ಆನ್‍ಲೈನ್‍ನಲ್ಲಿ ಕೊಂಡುಕೊಳ್ಳಲು ಭೇಟಿ ಕೊಡಿ:
http://www.akrutibooks.com/node/2023

ಮೇಲಕ್ಕೆ

ಬನವಾಸಿ ಬಳಗ ಪ್ರಕಾಶನ

ಬನವಾಸಿ ಬಳಗವು ಕನ್ನಡ ನಾಡು ನುಡಿಗಳ ಕುರಿತಾಗಿ ಹಲವು ವರ್ಷಗಳಿಂದ ಕನ್ನಡಿಗರಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದೆ. ಕನ್ನಡತನದ ಹಣತೆ ಹಚ್ಚುವ ನೂರಾರು ಬರಹಗಳನ್ನು ಮಿಂಬಲೆ (Internet) ಯಲ್ಲಿ ಬ್ಲಾಗ್ ಮೂಲಕ ಪ್ರಕಟಪಡಿಸಿದೆ. ಮಿಂಬಲೆ ಮೂಲಕ ಒಂದು ವರ್ಗದ ಓದುಗರನ್ನು ಅತ್ಯಂತ ಯಶಸ್ವಿಯಾಗಿ ತಲುಪಿದ್ದೇವೆ. ಮಿಂಬಲೆಯಿಂದಾಚೆ ಇರುವ ದೊಡ್ಡ ಸಂಖ್ಯೆಯ ಕನ್ನಡಿಗರಲ್ಲೂ ಕನ್ನಡತನದ ಅರಿವು ತುಂಬುವ ಆಶಯದಿಂದ ಬನವಾಸಿ ಬಳಗ ತನ್ನದೇ ಆದ ಪ್ರಕಾಶನವೊಂದನ್ನು ಶುರು ಮಾಡಿ ಅದರ ಮೂಲಕ ನಾಡ ಪರ, ಏಳಿಗೆ ಪರ ಚಿಂತನೆಯ ಸುತ್ತ ಬರೆಯಲ್ಪಟ್ಟ ಹೊತ್ತಗೆಗಳನ್ನು ಕನ್ನಡ ಸಮಾಜಕ್ಕೆ ತಲುಪಿಸುವ ಕೆಲಸಕ್ಕೆ ಕೈ ಹಾಕಿದೆ. ಈ ಬಗ್ಗೆ ಹೆಚ್ಚಿನ ವಿವರ ಪಡೆಯಲು ಪ್ರಕಾಶನದ ಈ ಪುಟಕ್ಕೆ ಭೇಟಿ ಕೊಡಿ.

ಬನವಾಸಿ ಬಳಗ ಪ್ರಕಾಶನ

ಮೇಲಕ್ಕೆ

ಭಾರತ ಒಕ್ಕೂಟಕ್ಕೊಪ್ಪುವ ಭಾಷಾ ನೀತಿ ಕುರಿತು ಜಾಗೃತಿ

ಭಾರತ ಒಕ್ಕೂಟಕ್ಕೆ ಯಾವುದೇ ರಾಷ್ಟ್ರ ಭಾಷೆ ಇಲ್ಲದಾಗಲೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ತೋರಿಸುವ ಮೂಲಕ ಅದರ ಹೇರಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆ ವೈವಿಧ್ಯತೆಯ ತವರಾದ ಭಾರತ ಒಕ್ಕೂಟದಲ್ಲಿ ಅಲ್ಪಸಂಖ್ಯಾತ ನುಡಿಗಳ ಪಾಲಿಗೆ ಹೇಗೆ ತೊಂದರೆ ಮಾಡುತ್ತಿದೆ, ಭಾರತ ಒಕ್ಕೂಟಕ್ಕೊಪ್ಪುವ ಸರಿಯಾದ ಭಾಷಾ ನೀತಿ ಎಂತದ್ದು ಅನ್ನುವ ಕುರಿತು ಬನವಾಸಿ ಬಳಗ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಭಾರತ ಒಕ್ಕೂಟಕ್ಕೊಪ್ಪುವ ಭಾಷಾ ನೀತಿ ವಿಚಾರ ಸಮ್ಮೇಳನ

ಹಲ ಭಾಷೆ, ಹಲ ಸಂಸ್ಕೃತಿ ಮತ್ತು ಹಲ ಆಚರಣೆಗಳ ತವರೂರಾದ ಭಾರತ ಒಕ್ಕೂಟದಲ್ಲಿ ರಾಷ್ಟ್ರಭಾಷೆ ಅನ್ನುವ ಸುಳ್ಳನ್ನು ಮುಂದಿಟ್ಟುಕೊಂಡು ಹಿಂದಿಯೊಂದನ್ನೇ ಆಡಳಿತದ ನುಡಿಯಾಗಿಸುವ ಕೇಂದ್ರ ಸರ್ಕಾರದ ನಿಲುವಿನಿಂದಾಗಿ ಕರ್ನಾಟಕದ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕ್ರಮೇಣವಾಗಿ ಮೂಲೆಗುಂಪಾಗುತ್ತಿರುವ ಬೆಳವಣಿಗೆಗೆಗಳು ನಡೆಯುತ್ತಿವೆ. ಇಂತಹ ಹೇರಿಕೆಯನ್ನು ವಿರೋಧಿಸಿ, ಹಲ ಭಾಷೆಗಳ ನೆಲೆಯಾದ ಒಕ್ಕೂಟದ ಎಲ್ಲ ಅಧಿಕೃತ ಭಾಷೆಗಳಿಗೂ ಸಮಾನ ಸ್ಥಾನಮಾನ, ಗೌರವ ಕಲ್ಪಿಸುವ ಭಾಷಾ ನೀತಿ ಜಾರಿಯಾಗಲಿ ಅನ್ನುವ ಕುರಿತು ಬನವಾಸಿ ಬಳಗ ಹಲ ವರ್ಷಗಳಿಂದ ಜನರಲ್ಲಿ ಜಾಗೃತಿ ತರುವ ಕೆಲಸ ಮಾಡುತ್ತಿದೆ. 2011ರ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನ ಕನ್ನಡ ಭವನದಲ್ಲಿ “ಭಾರತಕ್ಕೊಪ್ಪುವ ಭಾಷಾ ನೀತಿ” ಅನ್ನುವ ಕುರಿತು ವಿಚಾರ ಸಮ್ಮೇಳನವನ್ನು ಏರ್ಪಡಿಸಿತ್ತು. ನಾಡಿನ ಪ್ರಮುಖ ಚಿಂತಕರು, ಹೋರಾಟಗಾರರು ಮತ್ತು ಪತ್ರಕರ್ತರು ಪಾಲ್ಗೊಂಡಿದ್ದ ಈ ವಿಚಾರ ಸಂಕಿರಣದಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಗೌರವ, ಸ್ಥಾನಮಾನ ನೀಡುವಂತಹ ಹಾಗೂ ಆಯಾ ಪ್ರದೇಶದಲ್ಲಿ ಅಲ್ಲಿನ ಭಾಷೆಯ ಸಾರ್ವಭೌಮತ್ವ ಎತ್ತಿ ಹಿಡಿಯುವಂತಹ ಭಾಷಾ ನೀತಿ ಭಾರತ ಒಕ್ಕೂಟದಲ್ಲಿ ಜಾರಿಗೆ ಬರಬೇಕು ಅನ್ನುವ ಬಗ್ಗೆ ಒಮ್ಮತವೇರ್ಪಟ್ಟಿತ್ತು.

ಈ ವಿಚಾರ ಸಮ್ಮೇಳನದ ಬಗ್ಗೆ ಓದಲು ಭೇಟಿ ಕೊಡಿ
http://enguru.blogspot.in/2011/09/yashasviyaada-balagada-kaaryakrama.html

“ಹಿಂದಿ ಹೇರಿಕೆ – ಮೂರು ಮಂತ್ರ ನೂರು ತಂತ್ರ” ಹೊತ್ತಗೆ
ಬಹುಭಾಷಾ ಪ್ರಾಂತ್ಯಗಳ ಒಕ್ಕೂಟವಾದ ಭಾರತದಲ್ಲಿ ಹಿಂದಿಯನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿಸಿಕೊಂಡು ಅದರ ಬಳಕೆಯನ್ನು ಕಡ್ಡಾಯವಾಗಿ ಹೆಚ್ಚಿಸುವ ಗುರಿಯಿಟ್ಟುಕೊಂಡು ಕೇಂದ್ರಸರ್ಕಾರ ರೂಪಿಸಿಕೊಂಡಿರುವ ಇವತ್ತಿನ ಭಾರತದ ಭಾಷಾ ನೀತಿ ಎಂತದ್ದು? ಅದರಲ್ಲಿನ ತೊಂದರೆಗಳೇನು? ಅದನ್ನು ಒಪ್ಪುವುದರಿಂದ ನಮಗಾಗುವ ಹಾನಿಯೇನು? ಎಲ್ಲ ಭಾರತೀಯರಿಗೂ, ಎಲ್ಲ ಭಾರತೀಯರ ಭಾಷೆಗೂ ಸಮಾನ ಸ್ಥಾನಮಾನ ನೀಡುವ, ಎಲ್ಲರನ್ನು ಸಮಾನವೆಂದು ಕಾಣುವ ಭಾಷಾ ನೀತಿ ಎಂತದ್ದು? ಒಟ್ಟಾರೆ, ಭಾರತಕ್ಕೊಪ್ಪೋ ಭಾಷಾ ನೀತಿ ಹೇಗಿರಬೇಕು ಅನ್ನುವ ಬಗ್ಗೆ ಬನವಾಸಿ ಬಳಗ “ಹಿಂದಿ ಹೇರಿಕೆ – ಮೂರು ಮಂತ್ರ ನೂರು ತಂತ್ರ” ಅನ್ನುವ ಹೊತ್ತಗೆಯನ್ನು ಹೊರ ತಂದಿದೆ. ಈ ಹೊತ್ತಗೆಗೆ ನಾಡಿನ ಹಲವಾರು ಚಿಂತಕರು, ಪತ್ರಕರ್ತರು, ಸಾಹಿತಿಗಳಿಂದ ಮೆಚ್ಚುಗೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

“ಹಿಂದಿ ಹೇರಿಕೆ – ಮೂರು ಮಂತ್ರ ನೂರು ತಂತ್ರ” ಹೊತ್ತಗೆಯನ್ನು ಆನ್‍ಲೈನ್‍ನಲ್ಲಿ ಕೊಂಡುಕೊಳ್ಳಲು ಭೇಟಿ ಕೊಡಿ:
http://www.akrutibooks.com/node/2869

ಮೇಲಕ್ಕೆ

ಕನ್ನಡ ಮಾಧ್ಯಮದಲ್ಲಿ ಕಲಿಕೆ

ಕನ್ನಡ ನಾಡಿನ ಏಳಿಗೆಗೆ ಸಮಗ್ರವಾದ, ಎಲ್ಲ ಹಂತದ ಕಲಿಕೆಯ ಅಗತ್ಯಗಳನ್ನು ಪೂರೈಸಬಲ್ಲಂತಹ ತಾಯ್ನುಡಿಯಲ್ಲಿ ಕಟ್ಟಿಕೊಂಡಂತಹ ವೈಜ್ಞಾನಿಕವಾದ ಶಿಕ್ಷಣ ವ್ಯವಸ್ಥೆಯೇ ಸರಿಯಾದದ್ದು ಅನ್ನುವ ನಿಲುವು ಬನವಾಸಿ ಬಳಗದ್ದು. ಇದರತ್ತ ಬನವಾಸಿ ಬಳಗ ಹಮ್ಮಿಕೊಂಡಿರುವ ಕೆಲವು ಯೋಜನೆಗಳ ಪರಿಚಯ ಇಂತಿದೆ.

ಕನ್ನಡ ಮಾಧ್ಯಮ ಬ್ಲಾಗ್
ಕನ್ನಡಿಗರ ಇವತ್ತಿನ ಕಲಿಕೆ ಏರ್ಪಾಡು ಹೇಗಿದೆ? ಯಾವ ತೊಂದರೆಗಳು, ಕೊರತೆಗಳು ಅಲ್ಲಿವೆ. ಅವುಗಳಿಗೆ ಪರಿಹಾರಗಳೇನು, ಬೇರೆ ಬೇರೆ ದೇಶಗಳ ಕಲಿಕಾ ವ್ಯವಸ್ಥೆ ಹೇಗಿದೆ, ಅಲ್ಲಿಂದ ನಾವು ಕಲಿಯಬೇಕಾದದ್ದು ಏನು, ಪ್ರಸ್ತುತ ಸರ್ಕಾರಗಳು ಕಲಿಕೆಯತ್ತ ಕೈಗೊಳ್ಳುತ್ತಿರುವ ಎಲ್ಲ ನಿರ್ಧಾರಗಳ ಒಳಿತು, ಕೆಡಕುಗಳೇನು ಅನ್ನುವ ಕುರಿತ ಮಾಹಿತಿ, ಚರ್ಚೆ, ಸರಿ ನಿಲುವುಗಳನ್ನು ಹಂಚಿಕೊಳ್ಳಲು ಬನವಾಸಿ ಬಳಗ ಕನ್ನಡ ಮಾಧ್ಯಮ ಅನ್ನುವ ಪೋರ್ಟಲ್ ಅನ್ನು 2013ರಲ್ಲಿ ಹೊರ ತಂದಿದ್ದು ಕನ್ನಡದ ಮಕ್ಕಳ ಕಲಿಕೆಯ ಬಗ್ಗೆ ಸಮಗ್ರ ಚಿಂತನೆಯ ವೇದಿಕೆಯಾಗಿ ಇದನ್ನು ರೂಪಿಸುವತ್ತ ಕೆಲಸ ಮಾಡುತ್ತಿದೆ.
ಅಂಕಣಗಳನ್ನು ಓದಲು ಈ ಕೊಂಡಿಗೆ ಭೇಟಿ ಕೊಡಿ:
https://goo.gl/x62JuW

ಕನ್ನಡ ಮಾದ್ಯಮ ಶಾಲಾ ಸಮೀಕ್ಷೆ
ಕನ್ನಡ ಮಾಧ್ಯಮದಲ್ಲಿ ಕಲಿಕೆ ಕೊಡಿಸಬೇಕೆಂದು ನಿರ್ಧಾರ ಮಾಡಿದ ತಂದೆ-ತಾಯಂದಿರಿಗೆ ತಮ್ಮ ಮಕ್ಕಳನ್ನು ಯಾವ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಬೇಕು, ಯಾವ ಶಾಲೆ ಎಲ್ಲಿದೆ, ಯಾವ ಶಾಲೆಯಲ್ಲಿ ಏನೇನು ಸೌಲಭ್ಯಗಳಿವೆ, ಯಾವುದರಲ್ಲಿ ಯಾವ-ಯಾವ ಅರ್ಹತೆ ಪಡೆದುಕೊಂಡಿರುವ ಶಿಕ್ಷಕರಿದ್ದಾರೆ, ಯಾವುದರಲ್ಲಿ ಪಠ್ಯ ಮತ್ತು ಪಠ್ಯೇತರ ಕಲಿಕೆಗಳಿಗೆ ಸರಿಯಾದ ವ್ಯವಸ್ಥೆಯಿದೆ ಇತ್ಯಾದಿ ಮಾಹಿತಿ ಒಂದೆಡೆ ಸುಲಭವಾಗಿ ಕೈಗೆ ಸಿಗುವಂತೆ ದೊರಕುತ್ತಿಲ್ಲ ಅನ್ನುವುದು ಕಂಡು ಬರುತ್ತದೆ. ಕನ್ನಡ ಮಾಧ್ಯಮ ಕಲಿಕೆಯನ್ನು ಇನ್ನಷ್ಟು ಜನಪ್ರಿಯಗೊಳಿಸಲು ಇಂತಹ ಒಂದು ಪಟ್ಟಿ ಇರುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬನವಾಸಿ ಬಳಗ ಕಳೆದ ಎರಡು ವರ್ಷದಿಂದ ನಿರಂತರವಾಗಿ ಕರ್ನಾಟಕದ ಹಲವೆಡೆ ಮತ್ತು ಹೆಚ್ಚಾಗಿ ಬೆಂಗಳೂರಿನಲ್ಲಿರುವ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಬಗೆಗಿನ ಈ ರೀತಿಯ ಅತ್ಯವಶ್ಯವಾದ ಮಾಹಿತಿಯನ್ನು ಕಲೆ ಹಾಕುವ ಶಾಲಾ ಸಮೀಕ್ಷೆ ಕೈಗೊಂಡಿದೆ. ಕನ್ನಡ ಮಾಧ್ಯಮ ಶಾಲೆಗಳು ಎಲ್ಲಿವೆ ಮತ್ತು ಹೇಗಿವೆ ಎಂಬಂತಹ ಪ್ರಾಥಮಿಕ ಮಾಹಿತಿಯ ಕೊರತೆಯನ್ನು ನೀಗಿಸುವುದು ಮೊದಲ ಗುರಿ. ಮುಂದುವರೆಯುತ್ತಾ ಕನ್ನಡ ಮಾಧ್ಯಮ ಶಾಲೆಗಳ ಯಥಾಸ್ಥಿತಿಯನ್ನು ಅಳೆಯುವುದು ಮತ್ತು ತಂದೆ-ತಾಯಂದಿರಿಗೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳನ್ನು ಭರ್ತಿ ಮಾಡಿಸುವಾಗ ತಾವು ಮಾಡುವ ಆಯ್ಕೆ ಪ್ರಕ್ರಿಯೆಗೆ ಸಹಾಯ ಆಗುವಂತ ಮಾಹಿತಿಯನ್ನು ವರದಿಯೊಂದರ ಮೂಲಕ ಪ್ರಸ್ತುತ ಪಡಿಸುವುದೂ ಸಹ ಈ ಯೋಜನೆಯ ಗುರಿಯಾಗಿಟ್ಟುಕೊಳ್ಳಲಾಗಿದೆ. ಈ ಸದ್ಯಕ್ಕೆ ಶಾಲೆಗಳ ಸಮೀಕ್ಷಾ ವರದಿಯನ್ನು ಕನ್ನಡ ಮಾಧ್ಯಮ ಪೋರ್ಟಲ್ ಮೂಲಕ ನೀಡಲಾಗುತ್ತಿದೆ.
ಶಾಲೆಗಳ ವಿವರಕ್ಕಾಗಿ ಈ ಕೆಳಗಿನ ಕೊಂಡಿಗೆ ಭೇಟಿ ಕೊಡಿ
ಕನ್ನಡ ಶಾಲೆಗಳು

“ಕನ್ನಡ ಮಾಧ್ಯಮ ವಿದ್ಯಾರ್ಥಿ” ಫೇಸ್ ಬುಕ್ ಪುಟ
ಸಾಮಾಜಿಕ ಸಂಪರ್ಕ ತಾಣವಾದ ಫೇಸ್ ಬುಕ್ ಅಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ, ಕನ್ನಡ ಮಾಧ್ಯಮದ ಕಲಿಕೆಯ ಬಗ್ಗೆ ನಂಬಿಕೆ ಹೊಂದಿರುವ ಆಸಕ್ತರನ್ನು ಒಂದೆಡೆ ಸೇರಿಸಿ ಕನ್ನಡ ಮಾಧ್ಯಮದಲ್ಲಾಗಬೇಕಾದ ಸುಧಾರಣೆಗಳ ಬಗ್ಗೆ, ಒಳ್ಳೊಳ್ಳೆ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಮಾಹಿತಿ, ಚರ್ಚೆ, ನಿಲುವುಗಳನ್ನು ಹಂಚಿಕೊಳ್ಳಲು ಶುರುವಾದ ಸಂಪರ್ಕ ಜಾಲವೇ ಕನ್ನಡ ಮಾಧ್ಯಮ ವಿದ್ಯಾರ್ಥಿ ಅನ್ನುವ ಫೇಸ್ ಬುಕ್ ಪುಟ.
ಈ ಪುಟಕ್ಕೆ ಭೇಟಿ ಕೊಡಲು ಕೊಂಡಿ:
https://www.facebook.com/KannadaMadhyamaVidyarthi

“ಬೆಳಗಲಿ ನಾಡ ನಾಳೆಗಳು” ಹೊತ್ತಗೆ
ನಾಡಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ನಮ್ಮ ನಾಡಿನ ಏಳಿಗೆಗೆ ಪೂರಕವಾಗಿ ತಾಯ್ನುಡಿಯಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿರಬೇಕು, ಇವತ್ತಿರುವ ತೊಂದರೆಗಳೇನು, ಅದನ್ನು ನಿವಾರಿಸುಕೊಳ್ಳುತ್ತಲೇ ನಾಳೆಯ ದಿನ ಎಂತಹ ಕಲಿಕೆಯ ಏರ್ಪಾಡನ್ನು ಕನ್ನಡ ನಾಡಿನಲ್ಲಿ ಕಟ್ಟಿಕೊಳ್ಳಬೇಕಾಗಿದೆ ಅನ್ನುವ ಆಶಯವನ್ನು ಹೊತ್ತ “ಬೆಳಗಲಿ ನಾಡ ನಾಳೆಗಳು, ಕಲಿಕಾ ವ್ಯವಸ್ಥೆಗೊಂದು ಕೈಮರ” ಅನ್ನುವ ಹೊತ್ತಗೆಯನ್ನು ಬನವಾಸಿ ಬಳಗ ಹೊರತಂದಿದೆ.
ಇದರ ಬಗ್ಗೆ ಹೆಚ್ಚಿನ ವಿವರಗಳಿಗೆ ಭೇಟಿ ಕೊಡಿ:
https://banavasibalaga.wordpress.com/pustakagalu/

“ಬೆಳಗಲಿ ನಾಡ ನಾಳೆಗಳು” ಹೊತ್ತಗೆಯನ್ನು ಆನ್‍ಲೈನ್‍ನಲ್ಲಿ ಕೊಂಡುಕೊಳ್ಳಲು ಭೇಟಿ ಕೊಡಿ:
http://www.akrutibooks.com/node/2965

ಮೇಲಕ್ಕೆ

ಕನ್ನಡ ನುಡಿಯರಿಮೆ ಬಲಪಡಿಸುವುದು

ನುಡಿಯೆನ್ನುವುದು ಒಂದು ಜನಾಂಗದ ಸಂಸ್ಕೃತಿ, ಇತಿಹಾಸ, ಬದುಕುಗಳಿಗೆ ಹಿಡಿದ ಕನ್ನಡಿ. ಸಮಾಜವೊಂದರ ಏಳಿಗೆಯ ಜೀವನಾಡಿ ಅದರ ನುಡಿ. ಪ್ರಪಂಚದ ಮುಂದುವರೆದ ಜನಾಂಗಗಳೆಲ್ಲಾ ತಮ್ಮ ಕಲಿಕೆ, ದುಡಿಮೆಗಳನ್ನು ತಾಯ್ನುಡಿಯ ಸುತ್ತಲೇ ಕಟ್ಟಿಕೊಂಡಿರುವುದನ್ನು ಮುಂದುವರೆದ ದೇಶಗಳನ್ನು ನೋಡಿ ತಿಳಿಯಬಹುದು. ಕನ್ನಡಿಗರ ಏಳಿಗೆಗೂ ಕನ್ನಡವೇ ಸಾಧನ. ಆದರೆ ಕನ್ನಡ ನುಡಿಯು ಇಂದು ಕನ್ನಡಿಗರ ಕಲಿಕೆ ಬದುಕುಗಳನ್ನು ಕಟ್ಟಿಕೊಡಲು ಮತ್ತಷ್ಟು ಶಕ್ತವಾಗಬೇಕಾಗಿದೆ. ಜ್ಞಾನ, ವಿಜ್ಞಾನದ ಹಲವು ಶಾಖೆಗಳನ್ನು ಕನ್ನಡದಲ್ಲೂ ಸಾಧ್ಯವಾಗಿಸುವಂತೆ ಪದಗಳನ್ನು ಕಟ್ಟಿಕೊಳ್ಳುವ, ಕನ್ನಡಿಗರ ನುಡಿಯ ಸ್ವರೂಪದ ಅಧ್ಯಯನ ಮಾಡುವ ತುರ್ತು ಅಗತ್ಯ ನಮ್ಮ ಮುಂದಿದೆ. ಹಾಗಾಗಲು, ನಮ್ಮ ನುಡಿಯ ವೈಜ್ಞಾನಿಕ ಅಧ್ಯಯನವೂ ವೇಗ ಪಡೆದುಕೊಳ್ಳಬೇಕಾಗಿದೆ ಅನ್ನುವುದು ಬನವಾಸಿ ಬಳಗದ ನಿಲುವಾಗಿದೆ.

ಇಷ್ಟು ಮಹತ್ವವುಳ್ಳ ನುಡಿಯರಿಮೆಯ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚೆ, ಚಿಂತನೆಯನ್ನು ಬಿತ್ತುವ ನುಡಿಯರಿಮೆ ಕಮ್ಮಟಗಳನ್ನು, ಶಿಬಿರಗಳನ್ನು ಹಮ್ಮಿಕೊಳ್ಳುವುದು, ನುಡಿಯರಿಮೆಯ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಬೆಂಬಲ ಸೂಚಿಸುವ ಕೆಲಸಗಳನ್ನು ಬನವಾಸಿ ಬಳಗ ಮಾಡುತ್ತಿದೆ. ನುಡಿಯ ಸಾಧ್ಯತೆಯನ್ನು ಹೆಚ್ಚಿಸಲು ಅನುವಾಗುವಂತೆ ಮಿಂಬಲೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯ ಮೂಲಕ ಪದನೆರಕೆಯನ್ನು ಕಟ್ಟುವ ಯೋಜನೆಯಾದ ಕನ್ನಡ ವಿಕ್ಷನರಿ, ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕನ್ನಡಿಗರೆಲ್ಲ ಸೇರಿ ಕನ್ನಡ ಬೇರಿನ ಪದಗಳನ್ನು ಕಟ್ಟುವ, ಚರ್ಚೆ ಮಾಡುವ ಪ್ರಯತ್ನವಾದ “ಪದ ಪದ ಕನ್ನಡ ಪದಾನೇ” ಅನ್ನುವ ಫೇಸ್ ಬುಕ್ ಗುಂಪು ಮುಂತಾದ ಪ್ರಯತ್ನಗಳಿಗೆ ಬನವಾಸಿ ಬಳಗ ಬೆಂಬಲ ನೀಡಿದೆ. ಹಾಗೇ ನಮ್ಮ ಮಕ್ಕಳ ಕಲಿಕೆ ಅತ್ಯುತ್ತಮವಾಗಲು ಅದಕ್ಕೆ ಸಾಧನವಾದ ಕನ್ನಡನುಡಿಯ ಸರಿಯಾದ ಅಧ್ಯಯನವಾಗಬೇಕೆಂಬುದೂ ಮತ್ತು ಆ ಅಧ್ಯಯನದ ಫಲವು ಕನ್ನಡಮಾಧ್ಯಮದ ಕಲಿಕೆಯೇರ್ಪಾಡಿನಲ್ಲಿ ಅಳವಡಿಕೆಯಾಗಬೇಕೆಂಬುದೂ ಬನವಾಸಿ ಬಳಗದ ನಿಲುವಾಗಿದೆ. ಅದರಂತೆ ಕನ್ನಡ ನುಡಿಯರಿಮೆ(ಭಾಷಾವಿಜ್ಞಾನ)ಯ ಬಗ್ಗೆ ಕನ್ನಡಿಗರಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಹೊರ ಬಂದ ಎಲ್ಲರ ಕನ್ನಡ ಅನ್ನುವ ತಾಣಕ್ಕೆ ಬನವಾಸಿ ಬಳಗ ಬೆಂಬಲ ನೀಡಿದೆ. ಈ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಕೆಳಗಿನ ಕೊಂಡಿಗೆ ಭೇಟಿ ಕೊಡಿ:
ಎಲ್ಲರ ಕನ್ನಡ ತಾಣ

ಮೇಲಕ್ಕೆ

ಕನ್ನಡಿಗರಿಗೆ ಉದ್ಯೋಗ ಮಾರ್ಗದರ್ಶನ

ಕನ್ನಡ ನಾಡಿನಲ್ಲಿ ಹುಟ್ಟುವ ಹೆಚ್ಚಿನ ಕೆಲಸಗಳು ಕನ್ನಡಿಗರಿಗೇ ದೊರಕುವಂತಾಗಬೇಕು ಅನ್ನುವುದು ಬನವಾಸಿ ಬಳಗದ ನಿಲುವಾಗಿದೆ. ಈ ನಿಟ್ಟಿನಲ್ಲಿ ಬನವಾಸಿ ಬಳಗ ಕೆಲಸ ಕೊಡಿಸುವವರ ಮತ್ತು ಕೆಲಸದ ಅಗತ್ಯವಿರುವವರ ನಡುವೆ ಸೇತುವೆಯಾಗಿ ಕೆಲಸವನ್ನು ಮಾಡುತ್ತ ಬಂದಿದೆ. ಕನ್ನಡಿಗರಿಗೆ ಕೆಲಸ ಸಿಗಲು ಅನುವಾಗುವಂತೆ ಇದುವರೆಗೂ ೧೫ಕ್ಕೂ ಹೆಚ್ಚು ಉದ್ಯೋಗ ತರಬೇತಿ ಶಿಬಿರಗಳನ್ನು ಉಚಿತವಾಗಿ ನಡೆಸಿದ್ದೇವೆ. ಈ ಮೂಲಕ ನೂರಾರು ಜನರನ್ನು ಸಂದರ್ಶನ ಎದುರಿಸಲು ಸಿದ್ಧಗೊಳಿಸಿ ಅವರಲ್ಲಿ ಅನೇಕರಿಗೆ ಐಟಿ/ ಬಿಟಿ ಸಂಸ್ಥೆಗಳು/ ಕಾರ್ಖಾನೆಗಳಲ್ಲಿ ಕೆಲಸ ಗಿಟ್ಟಿಸುವಲ್ಲಿ ಸಹಾಯ ಮಾಡಿದ್ದೇವೆ.

ಕ್ಯಾಂಪಸ್ ಸಮೀಕ್ಷೆ
ಐ.ಟಿ ಉದ್ದಿಮೆಗಳು ತಮ್ಮ ಸಂಸ್ಥೆಗೆ ನೇಮಕ ಮಾಡಿಕೊಳ್ಳಲು ನಾಡಿನ ಬೇರೆ ಬೇರೆ ಕಾಲೇಜುಗಳಿಗೆ ಹೋಗುತ್ತವೆ. ಇವು ಹೆಚ್ಚು ಹೆಚ್ಚು ಕರ್ನಾಟಕದ ಕಾಲೇಜುಗಳಿಗೇ ಹೋಗಬೇಕು ಮತ್ತು ನಮ್ಮ ವಿದ್ಯಾರ್ಥಿಗಳು ನೇಮಕಾತಿಯಲ್ಲಿ ಆಯ್ಕೆಯಾಗಬೇಕು ಮತ್ತು ವಿದ್ಯಾಸಂಸ್ಥೆಗಳು ಕ್ಯಾಂಪಸ್ ಆಯ್ಕೆಯ ಪ್ರಕ್ರಿಯೆಯನ್ನು ಸಮರ್ಥವಾಗಿ ಆಯೋಜಿಸಬೇಕು. ಅಂದರೆ ಇಂಥಾ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಗಳ ಸಂಪೂರ್ಣ ಲಾಭ ನಮ್ಮ ನಾಡಿನ ವಿದ್ಯಾರ್ಥಿಗಳಿಗೂ, ನಾಡಿನ ಉದ್ದಿಮೆಗಳಿಗೂ ಸಿಗುವಂತಾಗುವುದು ಅತ್ಯಂತ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ರಾಜ್ಯದಲ್ಲಿರುವ ನಾನಾ ಉದ್ದಿಮೆದಾರರು, ವಿದ್ಯಾಸಂಸ್ಥೆಗಳು ಮತ್ತು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಬನವಾಸಿ ಬಳಗವು ಒಂದು ಸಮೀಕ್ಷೆಯನ್ನು ಕೈಗೊಂಡಿತ್ತು. ಈ ಸಮೀಕ್ಷೆಯು ಪ್ರಾತಿನಿಧಿಕವಾಗಿದ್ದು ಆಯ್ದ ಕೆಲವು ಸಂಸ್ಥೆಗಳಿಂದಲೂ, ಕಾಲೇಜುಗಳಿಂದಲೂ, ಅಭ್ಯರ್ಥಿಗಳಿಂದಲೂ ಮಾಹಿತಿ ಸಂಗ್ರಹಿಸಲಾಗಿತ್ತು. ಈ ಸಮೀಕ್ಷೆಯ ಮೂಲಕ ಕ್ಯಾಂಪಸ್ ಆಯ್ಕೆ ನಡೆಸುತ್ತಿರುವ/ ನಡೆಸಬೇಕೆಂದಿರುವ ಕಾಲೇಜುಗಳು ಮಾಡಿಕೊಂಡಿರುವ ವ್ಯವಸ್ಥೆಗಳು, ಅವು ಎದುರುಸುತ್ತಿರುವ ಸವಾಲುಗಳು, ಅನುಸರಿಸುತ್ತಿರುವ ಯಶಸ್ವಿ ಕ್ರಮಗಳು – ಇವುಗಳ ಬಗ್ಗೆ ಮಾಹಿತಿ ಕಲೆಹಾಕಲಾಯ್ತು. ಹಾಗೆಯೇ, ಕ್ಯಾಂಪಸ್ ಆಯ್ಕೆ ಮಾಡುವ ಕಂಪನಿಗಳ ನೇಮಕಾತಿ ವರ್ಗದವರು ಕಾಲೇಜುಗಳಿಂದ ಏನೇನು ತಯಾರಿ ಬಯಸುವರು, ಕ್ಯಾಂಪಸ್ ಆಯ್ಕೆಗೆ ಕಾಲೇಜುಗಳನ್ನ ಯಾವ ಆಧಾರದ ಮೇಲೆ ಆರಿಸುತ್ತಾರೆ? ಆಯ್ಕೆ ಪ್ರಕ್ರಿಯೆಯಲ್ಲಿ ಏನಿರುತ್ತದೆ? ಮತ್ತು ಕ್ಯಾಂಪಸ್ ಆಯ್ಕೆಯನ್ನು ಸುಸೂತ್ರವಾಗಿ ನಡೆಸುವಲ್ಲಿ ಕಂಪನಿಗಳು ಎದುರಿಸುತ್ತಿರುವ ಸವಾಲುಗಳೇನು? – ಇವುಗಳ ಬಗ್ಗೆಯೆಲ್ಲಾ ಮಾಹಿತಿ ಕೂಡಿಸಿ ಸಿದ್ದಪಡಿಸಲಾದ ವರದಿಯನ್ನು ಹಲವಾರು ಕಾಲೇಜುಗಳ ಜೊತೆ ಹಂಚಿಕೊಳ್ಳಲಾಯಿತು.

ಮೇಲಕ್ಕೆ

ಕನ್ನಡೇತರರಿಗೆ ಕನ್ನಡ ಕಲಿಸುವಿಕೆ

ಕನ್ನಡ ನಾಡಿಗೆ ಉದ್ಯೋಗ ಅರಸಿ ವಲಸೆ ಬಂದಿರುವ ಕನ್ನಡೇತರರು ಕನ್ನಡ ಕಲಿತು ಕನ್ನಡ ಮುಖ್ಯವಾಹಿನಿಯಲ್ಲಿ ಬೆರೆಯುವಂತಾಗಬೇಕು ಅನ್ನುವುದು ಬನವಾಸಿ ಬಳಗದ ನಿಲುವಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಕಲಿ ಅನ್ನುವ ಕನ್ನಡ ಕಲಿಸುವ ಕಾರ್ಯಕ್ರಮವನ್ನು ರೂಪಿಸಿ ಬೆಂಗಳೂರಿನ 20ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಕನ್ನಡ ಕಲಿಸಲು ಬೇಕಿರುವ ಬೆಂಬಲ ಬನವಾಸಿ ಬಳಗ ನೀಡಿದೆ. ಬಳಗದಿಂದ ಪ್ರೇರಿತರಾಗಿ ಹಲವರು ತಮ್ಮ ಕಚೇರಿಗಳಲ್ಲಿ, ಅಪಾರ್ಟ್-ಮೆಂಟ್ ಗಳಲ್ಲಿ ಕನ್ನಡ ಕಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಕೆಲವರು ಕನ್ನಡ ಕಲಿಸುವ ಸಂಸ್ಥೆಯನ್ನೇ ತೆರೆದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಅವರಿಗೆ ಬೇಕಿರುವ ಎಲ್ಲ ರೀತಿಯ ಬೆಂಬಲವನ್ನು ಬನವಾಸಿ ಬಳಗ ನೀಡಿದೆ, ನೀಡುತ್ತಿದೆ.

ಮೇಲಕ್ಕೆ

ಏನ್ ಗುರು ಕಾಫಿ ಆಯ್ತಾ? ಬ್ಲಾಗ್