ಬನವಾಸಿ ಬಳಗ

ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಕನ್ನಡ ದೇಶಮಂ

ನಿಲುವುಗಳು

ಕನ್ನಡ ಸಮಾಜ ಬನವಾಸಿ ಬಳಗದ ಕಣ್ಣಲ್ಲಿ

ಜಗತ್ತಿನ ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಸುತ್ತಲಿನ ಸಮಾಜದ ಬಗ್ಗೆ ಒಂದು ಅಭಿಪ್ರಾಯವಿರುತ್ತದೆ. ಅವನನ್ನು ತಾಕುವ ಹತ್ತಿರದ, ದೂರದ ಹಲವಾರು ವಿಷಯಗಳು ಅವನ ಈ ಅಭಿಪ್ರಾಯವನ್ನು ರೂಪಿಸಿರುತ್ತವೆ. ಅವು ಕಾಲದಿಂದ ಕಾಲಕ್ಕೆ ಬದಲಾಗುತ್ತಲೂ ಇರುತ್ತವೆ. ಕಾಲದೊಂದಿಗೆ, ತರ್ಕದೊಂದಿಗೆ, ಅನುಭವದೊಂದಿಗೆ ಈ ಅಭಿಪ್ರಾಯಗಳು ಬದಲಾಗುತ್ತಲೇ ಇರುತ್ತವೆ. ಅಂತಹದೊಂದು ಬದಲಾವಣೆಗೆ ತೆರೆದುಕೊಳ್ಳದವರು ನಿಂತ ನೀರಾಗುತ್ತಾರೆ. ಇದು ವ್ಯಕ್ತಿಯೊಬ್ಬನಿಗೆ ಅನ್ವಯಿಸುವ ಮಾತಾಗಿರದೇ ಸಮಾಜದಲ್ಲಿ ಬದಲಾವಣೆ ತರಲು ಬಯಸುತ್ತ ಕೆಲಸ ಮಾಡುವ ಸಾಮಾಜಿಕ ಸಂಘಟನೆಗಳನ್ನು ಸೇರಿದಂತೆ ಎಲ್ಲರಿಗೂ ಅನ್ವಯಿಸುವ ಮಾತು. ಕನ್ನಡ ಸಮಾಜ ಹೇಗಿದೆ? ಅದು ಹೇಗಿರಬೇಕು? ಅಲ್ಲಿರುವ ಕುಂದು ಕೊರತೆಗಳೇನು? ಅದರ ಏಳಿಗೆಯ ಸ್ವರೂಪ ಹೇಗಿರಬೇಕು? ಅದರ ಬಾಳುವೆಯ ರೀತಿ ಹೇಗಿರಬೇಕು ಇಂತಹ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವ ಪ್ರಯತ್ನ ಸಾಮಾಜಿಕ ಪ್ರಜ್ಞೆಯಿಂದ ಕೆಲಸ ಮಾಡುವ ಎಲ್ಲರೂ ಮಾಡುತ್ತಲೇ ಇರಬೇಕು. ಬನವಾಸಿ ಬಳಗವೂ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಈ ಚಿಂತನೆಗೆ ತನ್ನನ್ನು ತಾನು ತೆರೆದುಕೊಂಡೇ ಬಂದಿದೆ. ಕಾಲದಿಂದ ಕಾಲಕ್ಕೆ ತನ್ನ ನಿಲುವುಗಳನ್ನು ಇಂತಹ ಪ್ರಶ್ನೆಗಳಿಗೆ ಸಾಣೆ ಹಿಡಿದು ನೋಡಿದೆ, ಬದಲಾಗಬೇಕಾದಲ್ಲಿ ಬದಲಾಯಿಸಿಕೊಂಡಿದೆ. ಮುಂದೆಯೂ ಬದಲಾಯಿಸಿಕೊಳ್ಳುತ್ತೆ. ಕನ್ನಡ ಸಮಾಜ ಹೇಗಿದೆ? ಹೇಗಿರಬೇಕು? ಹೇಗಿರಬಾರದು ಅದಕ್ಕೂ ಹೊರ ಜಗತ್ತಿಗೂ ಇರುವ ನಂಟೇನು, ಇರಬೇಕಾದ ನಂಟೇನು ಅನ್ನುವ ಬಗ್ಗೆ ಎಲ್ಲರಿಗಿರುವಂತೆ ನಮಗೂ ನಮ್ಮದೇ ಆದ ನಿಲುವುಗಳಿವೆ, ಆ ನಿಲುವುಗಳ ಸುತ್ತ ಹಲ ಯೋಜನೆಗಳನ್ನು ಹಮ್ಮಿಕೊಂಡು ಬನವಾಸಿ ಬಳಗ ಕೆಲಸ ಮಾಡುತ್ತಿದೆ. ಆ ನಿಲುವುಗಳನ್ನು ಚಿಕ್ಕದಾಗಿ ಓದುಗರ ಮುಂದಿಡಬೇಕು ಅನ್ನುವ ಹಂಬಲವೇ ಈ ಬರಹ.

ಸರಿಯಾದ ವ್ಯವಸ್ಥೆಯ ಗಟ್ಟಿ ತಳಹದಿಯ ಮೇಲೆ ನಿಂತಿರುವ ಯಾವುದೇ ಸಮಾಜದಲ್ಲಿ ಶಾಂತಿ, ನೆಮ್ಮದಿ, ಏಳಿಗೆಗಳು ನೆಲೆಸಿರುತ್ತವೆ. ಇವತ್ತಿರುವ ವ್ಯವಸ್ಥೆಯ ವಸ್ತುಸ್ಥಿತಿಯನ್ನು ಹಿನ್ನೆಲೆಯಾಗಿಟ್ಟುಕೊಂಡೇ ಭವಿಷ್ಯದಲ್ಲಿ ಸರಿಯಾದ ಸಮಾಜ ಕಟ್ಟಿಕೊಳ್ಳುವ ಕನಸಿನತ್ತ ಕೆಲಸ ಮಾಡಬೇಕು ಮತ್ತು ಹಾಗೇ ಕನಸಿನ ಬೆನ್ನತ್ತಲು ಹಮ್ಮಿಕೊಳ್ಳುವ ಯೋಜನೆಗಳು, ತೆಗೆದುಕೊಳ್ಳುವ ನಿಲುವುಗಳು ಇವತ್ತಿನ ವಾಸ್ತವದಿಂದ ಆಚೆ ನಿಲ್ಲದೇ ಭವಿಷ್ಯದತ್ತ ಮುಖ ಮಾಡಿಕೊಂಡು ಕನ್ನಡ ಸಮಾಜದ ಏಳಿಗೆಯೊಂದನ್ನೇ ಗುರಿಯಾಗಿರಿಸಿಕೊಂಡಿರಬೇಕು ಅನ್ನುವುದು ಬನವಾಸಿ ಬಳಗದ ನಿಲುವು.

ಯಾವುದೇ ಏಳಿಗೆ ಹೊಂದಿದ ಭಾಷಾ ಜನಾಂಗವನ್ನು ಹತ್ತಿರದಿಂದ ಗಮನಿಸಿದರೆ ಅವರ ಏಳಿಗೆಗೆ ಕಾರಣಗಳನ್ನು ಹುಡುಕಿದರೆ ಕಾಣುವ ಉತ್ತರ ಒಂದೇ. ಆಯಾ ಭಾಷಾ ಜನಾಂಗದ ಕಲಿಕೆ, ಅವರ ದುಡಿಮೆ, ಆ ಜನಾಂಗದಲ್ಲಿನ ಸಾಧಿಸುವ ಛಲ ಮತ್ತು ಅವರಲ್ಲಿರುವ ಒಗ್ಗಟ್ಟು ಅನ್ನುವ ನಾಲ್ಕು ವಿಷಯಗಳು ಸರಿಯಾಗಿರುವುದು. ಈ ನಾಲ್ಕು ವಿಷಯಗಳು ಯಾವ ಯಾವ ಭಾಷಾ ಜನಾಂಗದಲ್ಲಿ ಸರಿಯಾಗಿಲ್ಲವೋ ಅವೆಲ್ಲವೂ ಹಿಂದುಳಿದ ಸಮಾಜಗಳೇ ಆಗಿವೆ. ಕರ್ನಾಟಕದ ಕನ್ನಡ ಸಮಾಜವೂ ಈ ನಾಲ್ಕರಲ್ಲೂ ಒಂದಿಷ್ಟು ತೊಡಕುಗಳನ್ನು ಎದುರಿಸುತ್ತಿರುವುದರಿಂದಲೇ ಕನ್ನಡ ಜನಾಂಗ ಜರ್ಮನ್ನರು, ಜಪಾನಿಯರು, ಕೋರಿಯನ್ ಭಾಷಾ ಜನಾಂಗಗಳಂತೆ ಮುಂದುವರೆಯಲಾಗಿಲ್ಲ ಅನ್ನುವುದು ಕಾಣಿಸುತ್ತದೆ.

ಎಲ್ಲ ಮುಂದುವರಿದ ನುಡಿ ಜನಾಂಗಗಳು ತಮ್ಮ ಕಲಿಕೆಯ ಏರ್ಪಾಡನ್ನು ತಮ್ಮ ತಾಯ್ನುಡಿಯ ಸುತ್ತಲೇ ರೂಪಿಸಿಕೊಂಡಿವೆ. ಮಗು ಮೊದಲ ಬಾರಿ ಶಾಲೆಗೆ ಕಾಲಿಟ್ಟ ಹೊತ್ತಿನಿಂದ ಅತ್ಯುನ್ನತ ಪದವಿ ಪಡೆಯುವವರೆಗಿನ ಎಲ್ಲ ಹಂತದ ಕಲಿಕೆ ಅವರ ತಾಯ್ನುಡಿಯಲ್ಲೇ ಸಾಧ್ಯವಾಗಿಸಿಕೊಂಡು, ಆಯಾ ನುಡಿ ಜನಾಂಗದವರನ್ನು ವಿದ್ಯಾವಂತರನ್ನಾಗಿಸಿದ್ದು ಮತ್ತು ಆ ಕಲಿಕೆಯ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾಗುವಂತಹ ಆರ್ಥಿಕ ವ್ಯವಸ್ಥೆಯನ್ನು ರೂಪಿಸಿಕೊಂಡು ದುಡಿಮೆಯ ಸರಿಯಾದ ಅವಕಾಶಗಳನ್ನು ಸೃಷ್ಟಿಸಿದ್ದು ಈ ಜನಾಂಗಗಳನ್ನು ಏಳಿಗೆಯತ್ತ ಕೊಂಡೊಯ್ದಿವೆ ಅನ್ನುವುದನ್ನು ಕಾಣಬಹುದು. ಅದರ ಜೊತೆಯಲ್ಲೇ ಆ ನುಡಿ ಜನಾಂಗಗಳನ್ನು ಅವರ ನುಡಿಯೆಂಬ ಕೊಂಡಿಯೇ ಬೆಸೆದು ಅವರಲ್ಲಿ ಒಗ್ಗಟ್ಟು ಮೂಡಿಸಿದ್ದರೆ ಆ ಒಗ್ಗಟ್ಟೇ ಅವರಲ್ಲಿ ಸಾಧಿಸುವ ಛಲವನ್ನು ತುಂಬಿದ್ದು ಅನ್ನುವುದನ್ನೂ ಕಾಣಬಹುದು.

ಕನ್ನಡಿಗನ ಗುರುತು ಕನ್ನಡವೊಂದೇ

ಮನುಷ್ಯ ಬದುಕಲು ತನ್ನ ಸುತ್ತಲೂ ಒಂದು ಸಮಾಜ ಕಟ್ಟಿಕೊಂಡಿರುತ್ತಾನೆ ಮತ್ತು ಪರಸ್ಪರ ಸಹಕಾರದ ಆಧಾರದ ಮೇಲೇ ಅಲ್ಲಿ ಬದುಕು ಸಾಗಿಸುತ್ತಾನೆ. ಒಂದು ಸಮಾಜದ ಅಡಿಗಲ್ಲೇ ಸಹಕಾರವಾಗಿರುವಾಗ, ಅಂತಹ ಸಹಕಾರಕ್ಕೆ ಪ್ರಮುಖ ಸಾಧನವಾಗೋದು ಜನರ ನಡುವಿನ ಸಂವಹನ ಮತ್ತು ಹೆಚ್ಚಿನೆಡೆಗಳಲ್ಲಿ ಸಂವಹನದ ಸಾಧನವಾದ ಆ ಜನರಾಡುವ ನುಡಿ. ಹೌದು, ಭಾಷೆ ಸಮಾಜದ ಸಂಪರ್ಕ ಮಾಧ್ಯಮ ಮಾತ್ರವಲ್ಲ, ಅದು ಸಹಕಾರದ ಮಾಧ್ಯಮ. ಇದೇ ಒಂದು ಭಾಷೆಗಿರುವ ಹೆಚ್ಚುಗಾರಿಕೆ. ಒಂದು ಪ್ರದೇಶದ ಏಳಿಗೆಗೆ ಅಥವಾ ಹಿಂಬೀಳುವಿಕೆಗೆ ಆ ಪ್ರದೇಶದ ಜನರು ತಮ್ಮ ನುಡಿಗೆ ತಮ್ಮ ಸಮಾಜದಲ್ಲಿ ಯಾವ ಸ್ಥಾನ ಕೊಟ್ಟುಕೊಂಡಿದ್ದಾರೆಂಬುದು ಮಹತ್ವದ ಕಾರಣವಾಗಿರುತ್ತದೆ. ಒಂದು ಪ್ರದೇಶದಲ್ಲಿನ ಜನತೆ ಸಹಜವಾಗಿಯೇ ತಮ್ಮ ನುಡಿಗಳಲ್ಲಿ ಕಲಿಕೆ, ಆಡಳಿತ, ದುಡಿಮೆಯೇ ಮೊದಲಾದ ಪ್ರತಿಯೊಂದು ಕೆಲಸವನ್ನು ಮಾಡಿಕೊಳ್ಳುವುದು ಸರಿಯಾದ ಮತ್ತು ಸಹಜವಾದ ವಿಧಾನ. ಅದನ್ನು ಸಾಧಿಸಿಕೊಳ್ಳುವಲ್ಲಿ ಆ ನುಡಿ ಜನಾಂಗದಲ್ಲಿ ಒಗ್ಗಟ್ಟಿರಬೇಕು. ಈ ನೆಲೆಗಟ್ಟಿನಲ್ಲಿ ಹಲ ಧರ್ಮ, ಹಲ ಜಾತಿಗಳ ವೈವಿಧ್ಯತೆಯಿರುವ ಕನ್ನಡ ನಾಡಿನಲ್ಲಿ ಈ ಒಗ್ಗಟ್ಟು ಸಾಧಿಸುವುದು ಹೇಗೆ ಎಂದು ಯೋಚಿಸಿದಾಗ ಕಾಣುವ ಉತ್ತರ ಪ್ರತಿಯೊಂದರಲ್ಲೂ ಎಲ್ಲರಿಗೂ ಸಮನಾದದ್ದೇನಿದೆಯೋ ಅದನ್ನು ಎತ್ತಿಹಿಡಿಯಬೇಕು ಎನ್ನುವುದು. ಸಮನಾದದ್ದೇನಿದೆಯೋ ಅದೇ ಜಾತಿ, ಅರ್ಥ, ಶಿಕ್ಷಣ, ಸಂಸ್ಕೃತಿ ಇವುಗಳುಂಟುಮಾಡಿರುವ ಒಡಕನ್ನು ಹೋಗಲಾಡಿಸಿ ಕನ್ನಡಿಗರನ್ನು ಒಗ್ಗೂಡಿಸುವುದು. ಅದಾವುದು ಎಂದು ಹುಡುಕಿದರೆ ಕಾಣುವುದು ಒಂದೇ. ಅದುವೇ ಕನ್ನಡಿಗರ ನುಡಿಯಾದ ಕನ್ನಡ. ಕನ್ನಡವೊಂದಕ್ಕೆ ಕನ್ನಡಿಗರನ್ನು ಹಲವು ಭೇದಗಳನ್ನು ಮರೆಮಾಚಿ ಒಂದಾಗಿಸುವ ಶಕ್ತಿಯಿರುವುದು. ಅದೇ ಅವರ ಮೊದಲ ಗುರುತು. ಆ ಗುರುತಿಗೆ ಅಂಟಿರುವ ಪೊರೆಯನ್ನು ಕಳಚಿ, ಎಲ್ಲ ತತ್ವದ ಎಲ್ಲೆ ಮೀರಿ, ನೂರು ಮತದ ಹೊಟ್ಟ ತೂರಿ ಕನ್ನಡಿಗರಲ್ಲಿ ಒಗ್ಗಟ್ಟು ಮೂಡಿಸುವ ಕಸುವು ಕನ್ನಡ ನುಡಿಯೊಂದಕ್ಕೇ ಇರುವುದು.

ಈ ಒಗ್ಗಟ್ಟು ಬೆಸೆಯಲು ನಮ್ಮ ನಿನ್ನೆಗಳನ್ನು, ಅಲ್ಲಿ ನಮ್ಮವರ ಸಾಧನೆಗಳನ್ನು, ನಮ್ಮ ನಾಡಿನ ಇತಿಹಾಸವನ್ನು ತಿಳಿಯುವ, ತಿಳಿಸುವ ಕೆಲಸಕ್ಕೆ ಬಲು ಮಹತ್ವವಿದೆ. ನಿನ್ನೆಯ ನಮ್ಮವರ ಸಾಧನೆಗಳು, ನಮ್ಮ ನಾಡಿನ ಇತಿಹಾಸ ನಮ್ಮಲ್ಲಿ ಸ್ಪೂರ್ತಿ ತುಂಬಿ ಇಂದು ನಾವೂ ಏನಾದರೂ ಸಾಧಿಸಬೇಕೆಂಬ ಉತ್ಸಾಹ ಮತ್ತು ಛಲಕ್ಕೆ ಕಾರಣವಾಗುವುದು. ಸಾಧನೆಯ ಶಿಖರವೇರಲು ನಮಗೂ ಯೋಗ್ಯತೆಯಿದೆ ಎನ್ನುವ ಮನವರಿಕೆಯು ಆತ್ಮವಿಶ್ವಾಸಕ್ಕೆ ಕಾರಣವಾಗುವುದು, ನಮ್ಮನ್ನು ಒಗ್ಗೂಡುವಂತೆ ಹುರಿದುಂಬಿಸುವುದು. ಅಂತಹದೊಂದು ಒಗ್ಗಟ್ಟು ಸಾಧಿಸಿದಾಗಲೇ ಛಲದಿಂದ ಒಂದು ನುಡಿ ಜನಾಂಗವಾಗಿ ನಮ್ಮ ಕಲಿಕೆ, ದುಡಿಮೆಯ ವ್ಯವಸ್ಥೆಗಳನ್ನು ಸಜ್ಜುಗೊಳಿಸಲು ಆಗುವುದು.

ಮೇಲಕ್ಕೆ

ಸರಿ ಹೋಗಬೇಕಿದೆ ಕನ್ನಡಿಗರ ಕಲಿಕೆ

ಜಾಗತೀಕರಣದ ಈ ದಿನಗಳಲ್ಲಿ ನುಡಿಯೊಂದು ಹೊಸ ಜಗತ್ತಿನ ಸವಾಲುಗಳಿಗೆ ತೆರೆದುಕೊಳ್ಳಬೇಕು. ತಡೆ ಇಲ್ಲದೇ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಒಂದು ಸಮಾಜವನ್ನು ತಟ್ಟುವ ಎಲ್ಲ ಹೊಸ ಬದಲಾವಣೆಗಳನ್ನು ತನ್ನೊಳಗೆ ಇಂಗಿಸಿಕೊಂಡು ಆ ಹೊತ್ತಿನ ಸಮಾಜದ ಬೇಡಿಕೆಗಳನ್ನು ಪೂರೈಸುವಂತಹ ಕಸುವು ಆ ಸಮಾಜದ ನುಡಿಗೆ ಬರಬೇಕು. ಅಂತಹ ಬದಲಾವಣೆಗಳಿಗೆ ತೆರೆದುಕೊಳ್ಳದ ನುಡಿ ಹೆಚ್ಚು ಕಾಲ ಬಾಳದು. ಕನ್ನಡ ನುಡಿಯು ಇಂದು ಅಂತಹುದೇ ಸವಾಲುಗಳನ್ನು ಎದುರಿಸುತ್ತಿದೆ. ಜಾಗತೀಕರಣ ತಂದಿರುವ ಸವಾಲುಗಳನ್ನು ಎದುರಿಸಿ, ಅದು ಕೊಡುವ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳುವಂತಾಗಲು ಕನ್ನಡದಲ್ಲಿ ಬದುಕಿನ ಎಲ್ಲ ಅರಿಮೆಗಳನ್ನು ತರುವತ್ತ ಕೆಲಸಗಳಾಗಬೇಕಿವೆ. ಕನ್ನಡ ಅಂದರೆ ಬರೀ ಸಾಹಿತ್ಯ, ಕಲೆ, ಸಿನೆಮಾಕ್ಕೆ ಸೀಮಿತವಾಗಿಸದೇ ಬದುಕಿನ ಪ್ರತಿ ಹಂತವನ್ನು ಕಟ್ಟಿಕೊಡುವ ಶಕ್ತಿ ಅದಕ್ಕೆ ದೊರಕಬೇಕಿದೆ. ಈ ಶತಮಾನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಬೇಕಿರುವ ಎಲ್ಲ ಸುಧಾರಣೆಗಳಿಗೂ ಅದು ತೆರೆದುಕೊಳ್ಳಬೇಕಿದೆ. ಈ ನೆಲೆಯಲ್ಲಿ ಕನ್ನಡಿಗರ ಕಲಿಕಾ ವ್ಯವಸ್ಥೆ ಚೆನ್ನಾಗಿ ಕಟ್ಟಿಕೊಳ್ಳುವುದು ಬಹು ಮುಖ್ಯವಾದದ್ದಾಗಿದೆ.

ಸ್ವಾತಂತ್ರ್ಯ ಬಂದ ಮೇಲೆ ಸರ್ಕಾರದ ನಿರಂತರ ಪ್ರಯತ್ನದ ಫಲವಾಗಿ 2011ರ ಜನಗಣತಿಯ ಹೊತ್ತಿಗೆ ಕರ್ನಾಟಕದ ಮುಕ್ಕಾಲು ಪಾಲು ಜನರು ಅಕ್ಷರಸ್ಥರಾಗಿದ್ದಾರೆ. ಸರ್ಕಾರ ಸುಮಾರು 50,000 ಸಾವಿರಕ್ಕೂ ಹೆಚ್ಚು ತಾಯ್ನುಡಿಯಲ್ಲಿ ಕಲಿಸುವ ಶಾಲೆಗಳನ್ನು ಕಟ್ಟುವ ಮೂಲಕ ಈ ಬದಲಾವಣೆಯಲ್ಲಿ ಬಹು ದೊಡ್ಡ ಪಾತ್ರವನ್ನೇ ವಹಿಸಿದೆ ಅಂದರೆ ತಪ್ಪಾಗದು. ಇಷ್ಟೆಲ್ಲ ಹೂಡಿಕೆಯ ನಂತರವೂ ಕನ್ನಡ ಮಾಧ್ಯಮದಲ್ಲಿನ ಕನ್ನಡಿಗರ ಕಲಿಕೆ ಜಗತ್ತಿನ ಮುಂದುವರೆದ ಹಲ ದೇಶಗಳ ಮಟ್ಟಕ್ಕೆ ತಲುಪಲಾಗಿಲ್ಲ ಅಂದರೆ ಅದಕ್ಕೆ ನಾಲ್ಕು ಮುಖ್ಯವಾದ ಕಾರಣಗಳನ್ನು ಕೊಡಬಹುದು. ಮೊದಲನೆಯದು ಈಗಿರುವ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದನ್ನು ಕನ್ನಡ ಅಂತ ಕಲಿಸುತ್ತಾ ಇದ್ದಾರೋ ಅದು ಸಾಮಾನ್ಯ ಕನ್ನಡಿಗರಿಗೆ ಬಹಳ ದೂರವಾಗಿರುವ ಏರ್ಪಾಡಿನಂತಿದ್ದು, ಕನ್ನಡವೇ ಕನ್ನಡಿಗರಿಗೆ ಕಬ್ಬಿಣದ ಕಡಲೆಯೆಂಬಂತಾಗಿದೆ. ಎರಡನೆಯದಾಗಿ 1991ರಲ್ಲಿ ಜಾಗತೀಕರಣಕ್ಕೆ ಭಾರತ ಒಕ್ಕೂಟ ತೆರೆದುಕೊಂಡ ನಂತರ ಬದಲಾದ ಅರ್ಥ ವ್ಯವಸ್ಥೆಯಲ್ಲಿ ಅವಕಾಶಗಳನ್ನು ಗಿಟ್ಟಿಸಲು ಕನ್ನಡಕ್ಕೆ ಯೋಗ್ಯತೆಯಿಲ್ಲ, ಅದು ಇಂಗ್ಲಿಶ್ ನಿಂದ ಮಾತ್ರ ಸಾಧ್ಯ ಹಾಗಾಗಿ ಇಂಗ್ಲಿಶ್ ಮಾಧ್ಯಮ ಶಾಲೆಗಳೇ ಏಳಿಗೆಗೆ ದಾರಿ ಅನ್ನುವ ಮಾರುಕಟ್ಟೆಯ ಪ್ರಚಾರ ತಂತ್ರಕ್ಕೆ ಕನ್ನಡಕ್ಕೂ ಇಂಗ್ಲಿಶಿಗಿರುವ ಎಲ್ಲ ಸಾಮರ್ಥ್ಯಗಳನ್ನು ಕಟ್ಟಿಕೊಡುವತ್ತ ದೂರ ದೃಷ್ಟಿಯಿಂದ ಕೆಲಸ ಮಾಡಬೇಕಾದ ಸರ್ಕಾರವೂ ಬಲಿಯಾಗಿರುವುದು. ಮೂರನೆಯದಾಗಿ, ಕಲಿಕೆ ಸಂವಿಧಾನದ ಜಂಟಿ ಪಟ್ಟಿಯಲ್ಲಿ ಸಿಲುಕಿರುವ ಕಾರಣ ರಾಜ್ಯಕ್ಕೆ ಶಿಕ್ಷಣದ ವಿಷಯದಲ್ಲಿ ಸಮರ್ಥವಾದ ನಿರ್ಧಾರ ತೆಗೆದುಕೊಳ್ಳಲು ಬೇಕಿರುವ ಸ್ವಾಯತ್ತತೆ ಇಲ್ಲದಿರುವುದು. ಕೊನೆಯದಾಗಿ, ಇವತ್ತಿನ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಎಲ್ಲ ಹಂತದ ಅಗತ್ಯಗಳನ್ನು ಪೂರೈಸಬಲ್ಲ ವ್ಯವಸ್ಥೆ ಆಗಿಲ್ಲದಿರುವುದು. ಇವೆಲ್ಲವೂ ಒಟ್ಟಾಗಿ ಇಂದು ಕನ್ನಡ ಮಾಧ್ಯಮ ಕುಂಟುತ್ತಿದೆ ಮತ್ತು ಕನ್ನಡಿಗರ ನಿಜವಾದ ಏಳಿಗೆಗೆ ಅಡ್ಡಲಾಗಿರುವ ಈ ತೊಂದರೆಗಳನ್ನು ನಾವು ಬಗೆಹರಿಸಿಕೊಳ್ಳಲೇಬೇಕು.

ಮೇಲಕ್ಕೆ

ಕಬ್ಬಿಣದ ಕಡಲೆಯಾಗಿರುವ ಕನ್ನಡಿಗರ ಕಲಿಕೆ

ಶಿಕ್ಷಣ ಅಂದರೆ ಮಕ್ಕಳ ಅಂತರಾಳದಲ್ಲಿ ಅಡಗಿರುವ ಇಡೀ ಜಗತ್ತನ್ನೇ ಬೆಳಗಿಸುವಂತಹ ಪ್ರತಿಭೆಯ ಮೇಲೆ ಕವಿದಿರುವ ಕೊಳೆಯನ್ನು ತೆಗೆಯುವುದೇ ಆಗಿದೆ. ಈ ಪ್ರಕ್ರಿಯೆ ಮಗುವು ಮನೆಯಲ್ಲಿ ಬಳಸುವ ಭಾಷೆಯಲ್ಲೇ ಸಾಧ್ಯ. ಮಕ್ಕಳ ಜ್ಞಾನ ಸಂಪಾದನೆಗೆ, ಪರಿಣಿತಿ ಸಾಧಿಸಲು, ಜಾಗತೀಕರಣದ ರಣರಂಗದಲ್ಲಿ ಸಾಧನೆಯ ಶಿಖರವನ್ನೇರಲು ತಾಯ್ನುಡಿ ಶಿಕ್ಷಣವೇ ಸೋಪಾನ. ಕನ್ನಡಿಗರಿಗೆ ಕನ್ನಡ ಮಾಧ್ಯಮವೇ ದಾರಿ. ಇದು ಜಗತ್ತೇ ಒಪ್ಪಿರುವ ಸತ್ಯವೂ ಹೌದು. ಹೀಗಿದ್ದರೂ ಕನ್ನಡ ಮಾಧ್ಯಮ ಕುಂಟುತ್ತಿರುವಲ್ಲಿ ಒಂದು ಮುಖ್ಯವಾದ ಕಾರಣ ಕಲಿಕೆಯ ಕನ್ನಡವು ಸಾಮಾನ್ಯ ಕನ್ನಡಿಗರಿಂದ ದೂರವಾಗಿರುವುದು. ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳನ್ನು ಸರಿಯಾಗಿ ಅರಿತು ರೂಪಿಸಿಲ್ಲದ ಪಠ್ಯಕ್ರಮದಿಂದಾಗಿ ಕಲಿಕೆಯ ಕನ್ನಡ ಕನ್ನಡಿಗರಿಗೇ ಕಬ್ಬಿಣದ ಕಡಲೆಯಂತಾಗಿದೆ. ಕನ್ನಡಿಗರ ಆಡುನುಡಿಗೆ, ಪರಿಸರದ ಭಾಷೆಗೆ ಹತ್ತಿರದ ಪದಗಳನ್ನು ಕಲಿಕೆಯಲ್ಲಿ ಒಳಗೊಳ್ಳುವಂತೆ ಮಾಡುವ ಪ್ರಯತ್ನಗಳನ್ನೇ ಮಾಡದೇ ಕನ್ನಡಿಗರೆಲ್ಲರಿಂದ ದೂರದ ಸಂಸ್ಕೃತ ಮೂಲದ ಪದಗಳನ್ನು ಮಿತಿ ಮೀರಿ ಬಳಸುವ ಮೂಲಕ ಕಲಿಕೆಯ ಕನ್ನಡ ಒಂದು ಹೊರೆಯೆನ್ನಿಸುವಂತೆ ಮಾಡುವ ಕೆಲಸ ಹಲವು ದಶಕಗಳಿಂದ ನಡೆದುಕೊಂಡು ಬಂದಿದ್ದು ಕನ್ನಡದ ಮಕ್ಕಳ ಕಲಿಕೆಯ ಮಟ್ಟ ಹೆಚ್ಚಿಸುವಲ್ಲಿ ಎಡವಿದೆ. ಈ ಕಲಿಕೆ ಮಕ್ಕಳಲ್ಲಿ ವಿಷಯದ ತಿಳುವಳಿಕೆ ಹೆಚ್ಚಿಸುವುದಕ್ಕಿಂತ ಬಾಯಿಪಾಠ ಮಾಡುವುದರಲ್ಲೇ ಕಾಲ ಕಳೆಯುವಂತೆ ಮಾಡಿದೆ. ಕಲಿಕೆಯ ಈ ತೊಂದರೆ ಕನ್ನಡಿಗರ ಕಲಿಕೆ ಪರಿಣಾಮಕಾರಿಯಾಗಿ ಆಗದಂತೆ ತಡೆದಿವೆ. ಕನ್ನಡಿಗರ ಕಲಿಕೆಯನ್ನು ಪರಿಣಾಮಕಾರಿಯಾಗಿಸುವಲ್ಲಿ ಕನ್ನಡದ ನಿಜವಾದ ನುಡಿಯರಿಮೆ(ಭಾಷಾ ವಿಜ್ಞಾನ)ಯ ಸುತ್ತ ಆಗಬೇಕಾದ ಕೆಲಸಗಳು ಸಾಕಷ್ಟಿವೆ. ಈ ಕೆಲಸಗಳಲ್ಲಿ ತೊಡಗಿಕೊಳ್ಳಲು ನುಡಿಯರಿಮೆ ಕ್ಷೇತ್ರದ ಪ್ರತಿಭಾವಂತರನ್ನು ಸೆಳೆಯುವ ಕೆಲಸ ಆದ್ಯತೆಯ ಮೇಲೆ ತುರ್ತಾಗಿ ನಡೆಯಬೇಕಿದೆ.

ಮೇಲಕ್ಕೆ

ಇಂಗ್ಲಿಶ್ ಮಾಧ್ಯಮದ ಬಗ್ಗೆ ಸರ್ಕಾರದ ನಿಲುವು ಬದಲಾಗಬೇಕು

ಶತಮಾನಗಳ ಕಾಲ ಮೇಲು-ಕೀಳಿನ ವ್ಯವಸ್ಥೆಯಲ್ಲಿ ಕಲಿಕೆಯೆನ್ನುವುದು ಕೆಲ ವರ್ಗದ ಸ್ವತ್ತಾಗಿಯೇ ಉಳಿದಿತ್ತು ನಮ್ಮ ನಾಡಿನಲ್ಲಿ. ಅಗಾಧವಾದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಈ ನಾಡಿನಲ್ಲಿ ಕಲಿಕೆಯನ್ನು ಕೇವಲ ಒಂದು ಲಾಭದ ಉದ್ದಿಮೆಯಂತೆ ನೋಡಲಾಗದು. ಸಮಾಜದ ಪ್ರತಿಯೊಂದು ವರ್ಗಕ್ಕೂ ಕಲಿಕೆಯ ಅವಕಾಶಗಳನ್ನು ಕಲ್ಪಿಸುವಲ್ಲಿ ಸರ್ಕಾರದ ಪಾತ್ರ ಹಿರಿದಾಗಿದೆ. ತಾಯ್ನುಡಿಯಲ್ಲಿ ಸಮಾನ ಶಿಕ್ಷಣ ಕಲ್ಪಿಸುವ ಕಲಿಕಾ ನೀತಿಯನ್ನು ರೂಪಿಸುವತ್ತ ಸರ್ಕಾರ ದಿಟ್ಟ ಹೆಜ್ಜೆಗಳನ್ನಿಡಬೇಕಿದೆ. ಹೀಗಿರುವ ಸಂದರ್ಭದಲ್ಲಿ ಸರ್ಕಾರವೇ ಮುಂದೆ ನಿಂತು ಕನ್ನಡ ಮಾಧ್ಯಮದಲ್ಲೇ ಕನ್ನಡಿಗರ ಕಲಿಕೆಯಾಗಬೇಕು ಅನ್ನುವ ತನ್ನ ಶಿಕ್ಷಣ ನೀತಿಯನ್ನೇ ಗಾಳಿಗೆ ತೂರುತ್ತಾ ಬೇಡಿಕೆಯ ನೆಪವೊಡ್ಡಿ ಇಂಗ್ಲಿಶ್ ಮಾಧ್ಯಮ ಶಾಲೆಗಳನ್ನು ತೆರೆಯಲು ನಿಂತಿರುವ ದಿನಗಳಲ್ಲಿ ನಾವಿದ್ದೇವೆ. ಇಂಗ್ಲೀಷ್ ಭಾಷೆಯಲ್ಲಿನ ಪರಿಣಿತಿ ತಂದುಕೊಡುವ ಲಾಭಕ್ಕೂ, ಇಂಗ್ಲೀಷ್ ಮಾಧ್ಯಮದ ಕಲಿಕೆ ಉಂಟುಮಾಡುವ ನಷ್ಟಕ್ಕೂ ನಡುವಿನ ವ್ಯತ್ಯಾಸವನ್ನು ಅರಿಯದ ಮುಗ್ಧರು ಜನಸಾಮಾನ್ಯರು. ಹಾಗಾಗಿ “ಸಿರಿವಂತರಿಗೆ ಸಿಗುತ್ತಿರುವ ಇಂಗ್ಲೀಷ್ ಮಾಧ್ಯಮದ ಕಲಿಕೆ ಬಡವರಿಗೂ ಸಿಗಲಿ” ಎಂಬ ಬಣ್ಣದ ಮಾತಿನ ಆಕರ್ಷಣೆಗೆ ಅವರು ಸಿಕ್ಕಿಕೊಳ್ಳುವುದು ಸುಲಭವಾಗಿದೆ. ಆದರೆ ಸರ್ಕಾರವೊಂದು ಇಂತಹ ಅವೈಜ್ಞಾನಿಕವಾದ, ದೂರಗಾಮಿ ಕೆಟ್ಟ ಪರಿಣಾಮವುಳ್ಳ ನಂಬಿಕೆಗೆ ನೀರೆರೆಯುವ ಕೆಲಸ ಮಾಡುವುದು ಸರಿಯಾದದ್ದೇ ಅನ್ನುವ ಪ್ರಶ್ನೆ ನಮ್ಮೆಲ್ಲರ ಮುಂದಿದೆ. ಕನ್ನಡನಾಡಿನ ಭವಿಷ್ಯ ರೂಪಿಸಲು ಅಗತ್ಯವಾಗಿರುವ ’ಕನ್ನಡಿಗರ ಕಲಿಕೆ’ಗೆ ‘ಕನ್ನಡ ನುಡಿ’ ಯೋಗ್ಯವಾಗಿದೆ ಎನ್ನುವ ನಂಬಿಕೆಯೇ ಸರ್ಕಾರಕ್ಕಿಲ್ಲ ಅನ್ನಿಸುವಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಈಗಿರುವ ಕಲಿಕೆ ಏರ್ಪಾಟಿನಲ್ಲಿರುವ ಕುಂದುಕೊರತೆಗಳನ್ನು ನೀಗಿಸಿಕೊಂಡು “ಅತ್ಯುತ್ತಮವಾಗಿ ನಿರ್ವಹಿಸಲಾಗುತ್ತಿರುವ, ಅತ್ಯುತ್ತಮ ಗುಣಮಟ್ಟದ ಎಲ್ಲ ಹಂತದ ಅವಶ್ಯಕತೆಗಳನ್ನು ಪೂರೈಸುವ ಶಿಕ್ಷಣ ವ್ಯವಸ್ಥೆ”ಯನ್ನು ಕಟ್ಟಬೇಕೆಂಬ ಸಣ್ಣ ಹಂಬಲವೂ ಸರ್ಕಾರಕ್ಕಿರುವಂತೆ ತೋರುತ್ತಿಲ್ಲ.

ಇವತ್ತು ಕಡಿಮೆ ದರದಲ್ಲಿ ಹೊರಗುತ್ತಿಗೆ ಸೇವೆ ಪಡೆಯಲು ಭಾರತದಲ್ಲಿ ಹೂಡಿಕೆ ಮಾಡುತ್ತಿರುವ ಸಂಸ್ಥೆಗಳಿಂದ ಇಂಗ್ಲಿಶ್ ಬಲ್ಲ ಹಲವರಿಗೆ ಕೆಲಸಗಳು ಸಿಕ್ಕಿವೆ. ನಾಳೆ ಭಾರತಕ್ಕಿಂತಲೂ ಕಡಿಮೆ ದರದಲ್ಲಿ ಸೇವೆ ಸಿಗುವ ದೇಶ ಕಂಡಾಗ ಅವು ಯಾವುದೇ ಮುಲಾಜಿಲ್ಲದೇ ತಮ್ಮ ಉದ್ಯಮವನ್ನು ಇಲ್ಲಿಂದ ಅಲ್ಲಿಗೆ ವರ್ಗಾಯಿಸುವವು. ಇಂತಹದೊಂದು ಅಲ್ಪ ಕಾಲದ ಲಾಭದ ವ್ಯವಸ್ಥೆಗೆ ಸರ್ಕಾರವೇ ಮುಂದೆ ನಿಂತು ತಾಯ್ನುಡಿ ಶಿಕ್ಷಣದ ವ್ಯವಸ್ಥೆಯನ್ನು ಕೈ ಬಿಡುವುದು ದೂರದ್ರುಷ್ಟಿಯ ಕೊರತೆಯನ್ನು ತೋರಿಸುತ್ತೆ.
ಆದ್ದರಿಂದ ಸರ್ಕಾರ ಇವತ್ತಿನ ಅವಕಾಶಗಳನ್ನು ಪಡೆದುಕೊಳ್ಳಲಾಗುವಂತೆ ಇಂಗ್ಲಿಶ್ ಅನ್ನು ಒಂದು ಭಾಷೆಗಾಗಿ ಚೆನ್ನಾಗಿ ಕಲಿಸುವುದರ ಜೊತೆ ಜೊತೆಗೆ ಕನ್ನಡದಲ್ಲಿ ಎಲ್ಲ ಹಂತದ ಕಲಿಕಾ ವ್ಯವಸ್ಥೆ ತರುವತ್ತ, ಮತ್ತು ಈಗಿರುವ ವ್ಯವಸ್ಥೆಯಲ್ಲಿರುವ ಕುಂದು ಕೊರತೆಗಳನ್ನು ಬಗೆಹರಿಸುವುದರತ್ತ ಗಮನ ಹರಿಸಬೇಕು. ಈ ಕೆಲಸದಲ್ಲಿ ತಾಯ್ನುಡಿಯಲ್ಲಿ ಶಿಕ್ಷಣ ಪೂರೈಸಲು ಮುಂದಾಗುವ ಖಾಸಗಿ ಸಂಸ್ಥೆಗಳಿಗೂ ಎಲ್ಲ ರೀತಿಯ ಬೆಂಬಲ ನೀಡಬೇಕು.

ಮೇಲಕ್ಕೆ

ಕಲಿಕೆ ರಾಜ್ಯದ ಪಟ್ಟಿಗೆ ಬರಲಿ

ಕನ್ನಡದಲ್ಲಿ ಒಳ್ಳೆಯ ಕಲಿಕೆಗೆ ಇರುವ ಮೂರನೆಯ ದೊಡ್ಡ ತೊಡಕೆಂದರೆ ಕಲಿಕೆ ಅನ್ನುವುದು ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡರ ಹಿಡಿತಕ್ಕೂ ಸಿಗುವಂತೆ ಸಂವಿಧಾನದ ಜಂಟಿ ಪಟ್ಟಿಯಲ್ಲಿದೆ. ರಾಜ್ಯ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ತಳ್ಳಿಹಾಕುವ ಹಕ್ಕು ಕೇಂದ್ರ ಸರ್ಕಾರಕ್ಕಿದೆ. ಕನ್ನಡಿಗರ ಕಲಿಕೆ ಹೇಗಿರಬೇಕು ಅನ್ನುವುದನ್ನು ನಿರ್ಧರಿಸುವ ಪೂರ್ತಿ ಅಧಿಕಾರವೇ ರಾಜ್ಯ ಸರ್ಕಾರಕ್ಕೆ ಇಲ್ಲದಿರುವಾಗ ಕನ್ನಡದಲ್ಲಿ ಅತ್ಯುತ್ತಮವಾದ ಕಲಿಕೆಯ ವ್ಯವಸ್ಥೆ ಕಟ್ಟುವ ಕನಸು ನನಸಾಗುವುದಾದರೂ ಹೇಗೆ? ಕೇಂದ್ರ ಸರ್ಕಾರವು ಶಿಕ್ಷಣದ ಮೇಲಿನ ತನ್ನ ಹಿಡಿತದ ಮೂಲಕ ಸಿ.ಬಿ.ಎಸ್.ಇ,ಐ.ಸಿ.ಎಸ್.ಇ ಮುಂತಾದ ತಾರತಮ್ಯ ಬಿತ್ತುವ ವ್ಯವಸ್ಥೆಗಳನ್ನು ಕನ್ನಡ ನಾಡಿನುದ್ದಕ್ಕೂ ಬಿತ್ತುತ್ತಿದೆ. ರಾಷ್ಟ್ರ ಭಾಷೆಯ ಸೋಗಿನಲ್ಲಿ ಹಿಂದಿ ಹೇರಿಕೆಗೆ ಮುಂದಾಗಿದೆ, ಕನ್ನಡ ನಾಡಿನ ಸರಿಯಾದ ಇತಿಹಾಸವನ್ನು ಮಕ್ಕಳಿಗೆ ಹೇಳಿಕೊಡಲಾಗದಂತೆ ರಾಜ್ಯದ ಕೈ ಕಟ್ಟಿ ಹಾಕಿದೆ. ಹೀಗಿರುವಾಗ ಕಲಿಕೆಯನ್ನು ರಾಜ್ಯದ ಪಟ್ಟಿಗೆ ಮರಳಿ ಸೇರಿಸುವಂತೆ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ. ಯಾಕೆಂದರೆ ಹುಬ್ಬಳ್ಳಿಯ, ಇಲ್ಲವೇ ಚಾಮರಾಜನಗರದ ಒಂದು ಮಗುವಿನ ಕಲಿಕೆಯ ಸವಾಲುಗಳನ್ನು ದೆಹಲಿಗಿಂತಲೂ ಬೆಂಗಳೂರೇ ಹೆಚ್ಚು ಚೆನ್ನಾಗಿ, ಸಮರ್ಥವಾಗಿ ಅರ್ಥ ಮಾಡಿಕೊಳ್ಳಬಲ್ಲುದು. ಕಾನೂನು, ಸಂವಿಧಾನಗಳನ್ನು ರೂಪಿಸಿರುವುದೇ ಜನರ ಏಳಿಗೆಗಾಗಿ ಮತ್ತು ಅಂತಹದೊಂದು ಏಳಿಗೆಗಾಗಿ ಸಂವಿಧಾನ ತಿದ್ದುಪಡಿಯ ಅಗತ್ಯ ಕಂಡರೆ ತಪ್ಪದೇ ಅದನ್ನು ಮಾಡಬೇಕು ಮತ್ತು ಆ ಮೂಲಕ ಕಲಿಕೆಯ ಪೂರ್ತಿ ಹೊಣೆ, ಅಧಿಕಾರವನ್ನು ರಾಜ್ಯದ ಕೈಗೆ ಕೊಡಬೇಕು.

ಮೇಲಕ್ಕೆ

ಉನ್ನತ ಶಿಕ್ಷಣ ಕನ್ನಡದಲ್ಲಿ ಸಾಧಿಸುವ ಕನಸು ನನಸಾಗಬೇಕು

ಇಂದು ಕನ್ನಡದಲ್ಲಿ ಕಲಿಕೆ ಅನ್ನುವುದು ಒಂದು ಹಂತದವರೆಗೆ ಮಾತ್ರವೇ ಸಾಧ್ಯವಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತಗಳವರೆಗೇನೋ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಸಿಗುತ್ತೆ. ಆದರೆ ಪದವಿ ಪೂರ್ವ ಮತ್ತು ಪದವಿ ಹಂತಗಳ ವರೆಗೆ ತಲುಪುವ ಹೊತ್ತಿಗೆ ಕನ್ನಡ ಕಾಣಸಿಗದ ಹಾಗಿದೆ. ವಿಜ್ಞಾನ-ತಂತ್ರಜ್ಞಾನಗಳು, ಅರ್ಥಶಾಸ್ತ್ರ, ಮ್ಯಾನೇಜ್ಮೆಂಟು ಇಂಥವಂತೂ ಕನ್ನಡದಲ್ಲಿ ಸಾಧ್ಯವೇ ಇಲ್ಲ ಅಂತ ನಾವು ಒಪ್ಪಿಕೊಂಡಂತಿದೆ. ಈ ಎಲ್ಲ ವಿದ್ಯೆಗಳನ್ನು ಕನ್ನಡದಲ್ಲೂ ಸಾಧ್ಯವಾಗಿಸಬಹುದು ಅನ್ನುವ ಕನಸೂ ಕಾಣದಷ್ಟು ನಮ್ಮ ನುಡಿಯ ಮೇಲೆ ನಾವೇ ನಂಬಿಕೆ ಕಳೆದುಕೊಂಡಿದ್ದೇವೆ. ಆದರೆ ಕನ್ನಡದಲ್ಲೇ ಎಲ್ಲ ಹಂತದ ಅತ್ಯುತ್ತಮ ಕಲಿಕೆಯ ವ್ಯವಸ್ಥೆಗಳನ್ನು ಕಟ್ಟಿಕೊಳ್ಳದೇ ಕನ್ನಡಿಗರ ಸಂಪೂರ್ಣ ಏಳಿಗೆಯ ಕನಸು ಎಂದಿಗೂ ಕೈಗೂಡದು. ಉನ್ನತ ಶಿಕ್ಷಣ ಕನ್ನಡದಲ್ಲೇ ತರಲು ಸಮಾಯಾಧಾರಿತ ಯೋಜನೆ ರೂಪಿಸಿಕೊಂಡು ಅದಕ್ಕೆ ಬೇಕಿರುವ ಹಣ, ಸಮಯ, ಆದ್ಯತೆಯನ್ನು ಸರ್ಕಾರ ಕೊಡಬೇಕು. ಅದಕ್ಕಾಗಿ ವಿಶ್ವ ದರ್ಜೆಯ ಕಲಿಕಾ ಸಂಸ್ಥೆಗಳನ್ನು ಹುಟ್ಟು ಹಾಕಬೇಕು, ಅಲ್ಲಿ ಕನ್ನಡದ ಅತ್ಯಂತ ಪ್ರತಿಭಾವಂತ ಶಿಕ್ಷಕರನ್ನು ನೇಮಿಸಬೇಕು, ಜಗತ್ತಿನ ಎಲ್ಲ ಜ್ಞಾನ ಶಾಖೆಗಳನ್ನು ಕನ್ನಡದಲ್ಲಿ ತರಲು ಹಟ ತೊಟ್ಟು ಕೆಲಸ ಮಾಡಬೇಕು. ಇಂತಹದೊಂದು ಪ್ರಯತ್ನವನ್ನು ಬಿಡದೇ ಶ್ರದ್ಧೆಯಿಂದ ಮಾಡಿದರೆ ಬದಲಾವಣೆ ಇನ್ನು ಕೆಲವೇ ವರ್ಷದಲ್ಲಿ ಖಂಡಿತ ಸಾಧ್ಯವಾಗುವುದು ಮತ್ತು ಕನ್ನಡಿಗರ ಕಲಿಕೆಯ ವ್ಯವಸ್ಥೆ ಪೂರ್ಣ ಪ್ರಮಾಣದ ವ್ಯವಸ್ಥೆಯಾಗುವುದು. ಹೆಚ್ಚು ಕಡಿಮೆ ಸತ್ತೇ ಹೋಗಿದ್ದ ಹಿಬ್ರೂ ಭಾಷೆ ಇಂದು ಇಸ್ರೇಲಿಗರ ಹೊಟ್ಟೆಯ ಹಿಟ್ಟಿನ ನುಡಿಯಾಗಿದೆ ಅನ್ನುವುದು ಮನಸ್ಸೊಂದಿದ್ದರೆ ಮಾರ್ಗವೂ ಅಲ್ಲೇ ಅನ್ನುವುದನ್ನು ಸಾಬೀತು ಮಾಡಿಲ್ಲವೇ?

ಮೇಲಕ್ಕೆ

ಒಳ್ಳೆಯ ಕಲಿಕೆಗೆ ತಕ್ಕ ದುಡಿಮೆಯ ವ್ಯವಸ್ಥೆ

ಕನ್ನಡಿಗರ ಕಲಿಕೆಯ ವ್ಯವಸ್ಥೆ ಸರಿ ಹೋಗಿ ಕನ್ನಡದಲ್ಲೇ ಅದ್ಭುತವಾದುದನ್ನು ಸಾಧಿಸುವ ಸಾಧಕರು ಕನ್ನಡ ನಾಡಲ್ಲಿ ಹುಟ್ಟುವ ದಿನ ಬರಬಹುದು. ಹಾಗೆ ಬಂದಾಗ ಅವರ ಬುದ್ದಿಶಕ್ತಿಯನ್ನು ಚೆನ್ನಾಗಿ ಬಳಸಿಕೊಂಡು ಹೊಸ ಹೊಸ ಸಂಶೋಧನೆಗಳನ್ನು ಮಾಡುವ, ಜಗತ್ತೇ ಬಯಸುವ ಉತ್ಪನ್ನಗಳನ್ನು ಕಟ್ಟುವ ಮತ್ತು ಅವುಗಳನ್ನು ಜಗತ್ತಿಗೆ ಮಾರುವಂತಹ ಸಂಸ್ಥೆಗಳನ್ನು ಕನ್ನಡಿಗರು ಕಟ್ಟುವ ಹಾಗಾಗಬೇಕು. ಹಾಗಾಗಲು ಏನು ಬೇಕು? ಉದ್ಯಮಿಗಳಾಗಿ ಹೊಸ ಹೊಸ ಉತ್ಪನ್ನಗಳನ್ನು ಕಟ್ಟುವ, ಉದ್ಯೋಗಗಳನ್ನು ಸೃಷ್ಟಿಸಬಲ್ಲ ಸಾಹಸಿಗಳಿಗೆ ಪೂರಕವಾದ ವಾತಾವರಣ ಕಲ್ಪಿಸುವಂತಹ ಅರ್ಥ ವ್ಯವಸ್ಥೆಯೂ, ಕನ್ನಡಿಗರಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಸರ್ಕಾರವೂ ಕನ್ನಡ ನಾಡಲ್ಲಿರಬೇಕು. ಅಂತಹದೊಂದು ಅರ್ಥ ವ್ಯವಸ್ಥೆಯಲ್ಲಿ ಸರ್ಕಾರದ ಪಾತ್ರವೇನಾಗಿರಬೇಕು ಅನ್ನುವ ಪ್ರಶ್ನೆ ಹುಟ್ಟುತ್ತದೆ.

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದ ಉನ್ನತಿಯನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಾನೆ. ಅಂತೆಯೇ ತನ್ನಲ್ಲಿರುವ ಮಿತವಾದ ಸಂಪನ್ಮೂಲವನ್ನು ತನ್ನ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳುವಂತೆ ಯೋಚಿಸಿ, ಯೋಜಿಸಿ ಬಳಸಬಲ್ಲ. ಆದ್ದರಿಂದ ಆ ವ್ಯಕ್ತಿ ತನ್ನ ಸಂಪನ್ಮೂಲದ ಜೊತೆ ಏನು ಮಾಡಬೇಕು, ಹೇಗೆ ಬಳಸಬೇಕು, ಏನು ಮಾಡಬಾರದು ಅನ್ನುವ ವಿಷಯದಲ್ಲಿ ಸರ್ಕಾರ ಅನಗತ್ಯ ಮೂಗು ತೂರಿಸಬಾರದು. ಬೇಡಿಕೆ, ಪೂರೈಕೆಗಳು ಮಾರುಕಟ್ಟೆಯಲ್ಲಿ ಸಂಧಿಸಿ ಸಮಾಜಕ್ಕೆ ಏನು ಬೇಕೊ ಅದನ್ನು ಪಡೆಯುವಂತಾಗಬೇಕು. ಕನ್ನಡಿಗರು ಉದ್ಯಮಶೀಲರಾಗಬೇಕು, ಹೊಸ ಹೊಸ ಉದ್ದಿಮೆಗಳನ್ನು ಕಟ್ಟಿ ಉದ್ಯೋಗ ಸೃಷ್ಟಿಸುವಂತವರಾಗಬೇಕು ಮತ್ತು ಅವುಗಳಿಗೆ ಪೂರಕವಾದ ವಾತಾವರಣ ಸರ್ಕಾರ ಕಟ್ಟಿಕೊಡಬೇಕು. ಇಲ್ಲಿ ಸರ್ಕಾರದ ನಿರ್ದಿಷ್ಟ ಪಾತ್ರವೇನು ಅನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಖಂಡಿತ ಮುಖ್ಯ.

ನಮ್ಮ ಸರ್ಕಾರ ಆದ್ಯತೆ ಅಲ್ಲದಿರುವ ಹಲವಾರು ಕ್ಷೇತ್ರಗಳಲ್ಲಿ ಇಂದು ನೆಲೆ ನಿಂತಿದೆ. ಹಾಗಾಗಿಯೇ ನಾಡಿನ ಭವಿಷ್ಯವನ್ನೇ ರೂಪಿಸುವಂತಹ ಕ್ಷೇತ್ರಗಳತ್ತ ಕೊಡಬೇಕಾದಷ್ಟು ಸಂಪನ್ಮೂಲ, ಗಮನ ಇಂದು ಕೊಡಲಾಗುತ್ತಿಲ್ಲ. ಇದು ಒಂದೆಡೆ ಅತ್ಯಮೂಲ್ಯ ಸಂಪನ್ಮೂಲದ ಸೋರಿಕೆಗೆ ಕಾರಣವಾಗಿದ್ದರೆ, ಇನ್ನೊಂದೆಡೆ ಆದ್ಯತೆ ಇರುವ ಹಲವಾರು ಕ್ಷೇತ್ರಗಳಿಗೆ ಬೇಕಿರುವ ಸಂಪನ್ಮೂಲ ಹೊಂದಿಸುವಲ್ಲಿಯೂ ತೊಡಕಾಗಿ ಪರಿಣಮಿಸಿದೆ. ಸರ್ಕಾರ ಸಮಾಜದ ಏಳಿಗೆಗೆ ಆದ್ಯತೆಯಾಗಿರದ ಇಂತಹ ಎಲ್ಲ ಕ್ಷೇತ್ರಗಳಿಂದ ಹೊರ ಬರಬೇಕು. ಸರ್ಕಾರದ ಪಾತ್ರವೇನಿದ್ದರೂ ಕಾನೂನು ಸುವ್ಯವಸ್ಥೆ, ಆಸ್ತಿ ಹಕ್ಕಿನ ರಕ್ಷಣೆಯಂತಹ ರಕ್ಷಣೆಯ ಕೆಲಸಗಳಿಗೆ ಸೀಮಿತವಾಗಬೇಕು. ಮಾರುಕಟ್ಟೆ ಎಲ್ಲೆಲ್ಲಿ ಒಂದಿಡೀ ಸಮಾಜದ ಬೇಡಿಕೆಗಳನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಪೂರೈಸುವಲ್ಲಿ ವಿಫಲವಾಗುತ್ತದೆಯೋ ಅಲ್ಲಿ ಮಾತ್ರವೇ ಸರ್ಕಾರವು ಪ್ರವೇಶಿಸಿ ಕೊರತೆ ನಿವಾರಿಸುವಂತಾಗಬೇಕು. ಆದ್ದರಿಂದಲೇ ಮಾರುಕಟ್ಟೆಯಲ್ಲಿ ಇತ್ಯರ್ಥವಾಗದ ಶಿಕ್ಷಣ, ಆರೋಗ್ಯ ಸೇವೆಯಂತಹ ವಿಷಯಗಳನ್ನು ಹೊರತು ಪಡಿಸಿ ಉಳಿದ ಕ್ಷೇತ್ರಗಳಲ್ಲಿ ಸರ್ಕಾರದ ಪಾತ್ರ ಮಾರುಕಟ್ಟೆ ಸರಿಯಾಗಿ ಕೆಲಸ ಮಾಡಲು ಬೇಕಿರುವ ನೀತಿನಿಯಮಗಳನ್ನು ರೂಪಿಸುವುದಷ್ಟಕ್ಕೇ ಸೀಮಿತವಾಗಿರುವ ಸ್ಥಿತಿಯನ್ನು ಮುಂದುವರೆದ ನುಡಿ ಜನಾಂಗಗಳಲ್ಲಿ ಕಾಣುತ್ತೇವೆ. ಬೆಂಗಳೂರು ಒಂದರಲ್ಲೇ ಜರ್ಮನಿ ಒಂದೇ ದೇಶದ ೧೭೦ಕ್ಕೂ ಹೆಚ್ಚು ಸಂಸ್ಥೆಗಳು ಕೆಲಸ ಮಾಡುತ್ತಿವೆ ಅನ್ನುವುದನ್ನು ಗಮನಿಸಿದಾಗ ಸರಿಯಾದ ಕಲಿಕೆ ಮತ್ತು ದುಡಿಮೆಯ ವ್ಯವಸ್ಥೆಗಳನ್ನು ರೂಪಿಸಿಕೊಂಡ ನಾಡುಗಳು ಜಗತ್ತಿನಲ್ಲೆಲ್ಲ ತಮ್ಮ ಉತ್ಪನ್ನಗಳನ್ನು ವ್ಯಾಪಾರ ಮಾಡಿ ಗೆಲುವು ಸಾಧಿಸುತ್ತಿವೆ ಅನ್ನುವುದು ಕಾಣಿಸುತ್ತದೆ. ಕನ್ನಡಿಗರು ಇಂದಲ್ಲದಿದ್ದರೂ ನಾಳೆ ಇಂತಹದೊಂದು ಸಾಧನೆ ಮಾಡಲು ನಮ್ಮ ಕಲಿಕೆಯ ಮತ್ತು ದುಡಿಮೆಯ ವ್ಯವಸ್ಥೆಗಳು ಇದೇ ರೀತಿಯದ್ದಾಗಿರಬೇಕು ಅನ್ನುವುದು ಕಾಣಿಸುತ್ತದೆ.

ಮೇಲಕ್ಕೆ

ವಲಸೆ ಮತ್ತು ಉದ್ಯೋಗದ ಹಕ್ಕು

ಭಾರತ ಒಕ್ಕೂಟದಲ್ಲಿ ಅಂತರ್ ರಾಜ್ಯ ವಲಸೆಯನ್ನು ನಿಯಂತ್ರಿಸುವ ಬಗ್ಗೆ ಯಾವುದೇ ಕಾನೂನಿಲ್ಲ. ಸರಿಯಾದ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯಕ್ಕೂ ತನ್ನ ನೆಲದ ದುಡಿಮೆ ವ್ಯವಸ್ಥೆಯಲ್ಲಿ ಹುಟ್ಟುವ ಕೆಲಸಗಳಲ್ಲಿ ಹೆಚ್ಚಿನ ಪಾಲು ಆ ನೆಲದ ಮಕ್ಕಳಿಗೆ ಸಿಗುವಂತೆ ಕಾನೂನು ರೂಪಿಸುವ ಅಧಿಕಾರವಿರುತ್ತದೆ. ಈ ನಿಟ್ಟಿನಲ್ಲಿ ಭಾರತ ಒಕ್ಕೂಟದಲ್ಲೂ ವಲಸೆಯನ್ನು ನಿಯಂತ್ರಿಸುವ ಹಕ್ಕು ಮತ್ತು ಆಯಾ ರಾಜ್ಯದಲ್ಲಿ ಹುಟ್ಟುವ ಕೆಲಸಗಳಲ್ಲಿ ಸಿಂಹಪಾಲು ಆ ನೆಲದ ಮಕ್ಕಳಿಗೆ ಸಿಗುವಂತೆ ಕಾನೂನು ರೂಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಸಿಗಬೇಕಿದೆ. ಮಿತಿ ಮೀರಿದ ವಲಸೆಯಿಂದ ನಗರಗಳ ಮೂಲಭೂತ ಸೌಕರ್ಯಗಳು ಕುಸಿದು ನಗರಗಳಲ್ಲಿ ಬದುಕಿನ ಮಟ್ಟ ಕುಸಿಯುತ್ತಿರುವುದು ಒಂದೆಡೆಯಾದರೆ ಅವಕಾಶಗಳಿಗಾಗಿ ಮೂಲ ನಿವಾಸಿಗಳ ಮತ್ತು ವಲಸಿಗರ ನಡುವೆ ಅಸಹನೆ ಬೆಳೆಯುವಂತಹ ಬದಲಾವಣೆಗಳು ನಮ್ಮಲ್ಲಿ ಕಾಣುತ್ತಿವೆ. ಇದನ್ನು ತಪ್ಪಿಸಲು ಪ್ರತಿ ರಾಜ್ಯಕ್ಕೂ ತನ್ನದೇ ಆದ ಉದ್ಯೋಗ ನೀತಿ ರೂಪಿಸಿಕೊಳ್ಳುವುದಕ್ಕೆ ಅನುವಾಗುವಂತೆ ಸಂವಿಧಾನ ತಿದ್ದುಪಡಿಯಾಗಬೇಕು. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹೂಡಿಕೆಯಾಗುವ ಬಂಡವಾಳದಿಂದ ಹುಟ್ಟುವ ಖಾಸಗಿ ಕೆಲಸಗಳಿರಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕೆಲಸಗಳಿರಲಿ, ಎಲ್ಲ ಹಂತದಲ್ಲೂ ಸರೋಜಿನಿ ಮಹಿಷಿ ವರದಿಯನ್ವಯ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಕಲ್ಪಿಸುವ ಉದ್ಯೋಗ ನೀತಿಯನ್ನು ಕರ್ನಾಟಕ ಸರ್ಕಾರ ಕಾನೂನಿನ ರೂಪದಲ್ಲಿ ಜಾರಿಗೆ ತರಬೇಕು ಮತ್ತು ಅಂತಹ ಕಾನೂನನ್ನು ಅನುಷ್ಟಾನಗೊಳಿಸಲು ಪೂರಕವಾಗುವಂತೆ ಅನಿಯಂತ್ರಿತ ಅಂತರ್ ರಾಜ್ಯ ವಲಸೆಗೆ ಅವಕಾಶ ಕಲ್ಪಿಸುವ ಇಂದಿನ ನೀತಿಗಳು ಬದಲಾಗಬೇಕು. ಯಾವ ರಾಜ್ಯಕ್ಕೆ, ಎಷ್ಟರ ಮಟ್ಟಿಗಿನ ವಲಸೆ ಬೇಕು ಅನ್ನುವುದನ್ನು ಆಯಾ ರಾಜ್ಯವೇ ನಿರ್ಧರಿಸಲಿ. ಆಯಾ ರಾಜ್ಯದ ಜನರ ಉದ್ಯೋಗದ ಹಕ್ಕನ್ನು ಮಾನ್ಯ ಮಾಡುವ ನೀತಿ ಭಾರತ ಒಕ್ಕೂಟದಲ್ಲಿ ಜಾರಿಗೆ ಬರಬೇಕು.

ಮೇಲಕ್ಕೆ

ಮಾರುಕಟ್ಟೆ ಮತ್ತು ಗ್ರಾಹಕ ಸೇವೆ

ಕಳೆದ ಇಪ್ಪತ್ತು ವರ್ಷದಿಂದ ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಯತ್ತ ಭಾರತದ ಒಕ್ಕೂಟ ಸಾಗುತ್ತಿದೆ. ಇದರಿಂದಾಗಿ ಹಿಂದೆಂದೂ ಇಲ್ಲದ ರೀತಿಯಲ್ಲಿ ಗ್ರಾಹಕನ ಮುಂದೆ ಆಯ್ಕೆಯ ಅವಕಾಶಗಳಿವೆ ಮತ್ತು ಗ್ರಾಹಕನೇ ನಿರ್ಣಾಯಕ ಅನ್ನುವ ಸ್ಥಿತಿ ಮಾರುಕಟ್ಟೆಯಲ್ಲಿ ಹುಟ್ಟುತ್ತಿದೆ. ಇಂತಹ ಗ್ರಾಹಕ ಕೇಂದ್ರಿತ ಬದಲಾವಣೆಯ ಸಮಯದಲ್ಲಿ ಕನ್ನಡ ಅನ್ನುವುದು ಕನ್ನಡ ನಾಡಿನ ಮಾರುಕಟ್ಟೆಯಲ್ಲಿ ಗ್ರಾಹಕಸೇವೆಯ ಮೊದಲ ಆಯ್ಕೆಯ ಭಾಷೆಯಾಗಬೇಕಾಗಿದೆ. ಗ್ರಾಹಕ ಪಕ್ಷಪಾತಿ ಮಾರುಕಟ್ಟೆಯಲ್ಲಿ ಕನ್ನಡ ನೆಲೆ ಕಾಣದೇ ಹೋದರೆ ಅದು ಅಡುಗೆಮನೆಗೆ ಸೀಮಿತವಾದ ನುಡಿಯಾಗುವ ಎಲ್ಲ ಅಪಾಯ ನಮ್ಮ ಮುಂದಿದೆ. ಜ್ಞಾನ, ಮನರಂಜನೆ, ಆಡಳಿತ ಸೇರಿದಂತೆ ಬದುಕಿನ ಎಲ್ಲ ಹಂತಗಳಲ್ಲಿ ಗ್ರಾಹಕನ ಆದ್ಯತೆಗಳನ್ನು ಪೂರೈಸಬಲ್ಲ ನುಡಿಯಾಗಿ ಕನ್ನಡ ನೆಲೆ ಕಾಣಬೇಕಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಕಾನೂನಿನಲ್ಲಿ ಯಾವುದೇ ಮಾನ್ಯತೆಯಿಲ್ಲದ ಡಬ್ಬಿಂಗ್ ಮೇಲಿನ ನಿಷೇಧ ಜ್ಞಾನ, ವಿಜ್ಞಾನ, ಮನರಂಜನೆಯ ಹಲವಾರು ಶಾಖೆಗಳು ಕನ್ನಡದಲ್ಲಿ ದೊರಕದಂತೆ ಮಾಡಿವೆ ಮತ್ತು ಗ್ರಾಹಕನಾಗಿ ಕನ್ನಡಿಗನ ಹಕ್ಕನ್ನು, ಆಯ್ಕೆಗಳನ್ನು ಮೊಟಕುಗಳಿಸಿವೆ. ಇಂತಹ ಅಸಂವಿಧಾನಿಕ ನಿಷೇಧ ಸರಿಯಲೇಬೇಕಿದೆ. ಕನ್ನಡ ಸಮಾಜದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಬೇಕು, ಈ ವ್ಯವಸ್ಥೆಯ ಎಲ್ಲ ಹಂತದಲ್ಲೂ ಕನ್ನಡ ನೆಲೆ ಕಾಣಬೇಕು ಅನ್ನುವುದಾದರೆ ಕನ್ನಡದ ಗ್ರಾಹಕನಿಗೂ ಕನ್ನಡಕ್ಕೂ ಒಂದು ಕಡಿಯದ ನೆಂಟು ಬೆಸೆಯಬೇಕು. ಕನ್ನಡ ಕೇಂದ್ರಿತವಾದ ಒಂದು ಗಟ್ಟಿ ಗ್ರಾಹಕ ಚಳುವಳಿಯನ್ನು ರೂಪಿಸುವುದೇ ಮುಂದಿನ ದಿನದಲ್ಲಿ ಕನ್ನಡವನ್ನು ಮಾರುಕಟ್ಟೆಯ ನುಡಿಯಾಗಿ ಉಳಿಸಿಕೊಳ್ಳುವ ಏಕೈಕ ಹಾದಿಯಾಗಿದೆ.

ಮೇಲಕ್ಕೆ

ಏಳಿಗೆಯಲ್ಲಿ ಒಕ್ಕೂಟ ವ್ಯವಸ್ಥೆಯ ಮಹತ್ವ

ಬಹುಭಾಷಾ ಪ್ರಾಂತ್ಯಗಳು ಒಂದಾಗಿ ಭಾರತವೆಂಬ ಒಕ್ಕೂಟ ಅಸ್ತಿತ್ವ ಬಂದಾಗ ಇಷ್ಟೊಂದು ಭಾಷೆ, ಜನಾಂಗ, ಸಂಸ್ಕೃತಿಯ ನೆಲೆಯಾದ ಭಾರತಕ್ಕೆ ಯಾವ ಮಾದರಿಯ ಆಡಳಿತ ವ್ಯವಸ್ಥೆ ಒಳ್ಳೆಯದು ಅನ್ನುವುದನ್ನು ಯೋಚಿಸಿದಾಗ ಒಕ್ಕೂಟ ಮಾದರಿಯ ಪ್ರಜಾತಂತ್ರ ವ್ಯವಸ್ಥೆಯೇ ಸರಿಯಾದದ್ದು ಅನ್ನುವ ನಿಲುವಿಗೆ ಆವತ್ತಿನ ನಾಯಕರು ಬಂದಿದ್ದರು. ಆದರೆ ದೇಶವನ್ನು ಒಂದಾಗಿರಿಸಲು “ಬಲಿಷ್ಟ ಕೇಂದ್ರ ಮತ್ತು ಬಲಹೀನ ರಾಜ್ಯ”ವೇ ಸರಿಯಾದ ಹಾದಿ ಅನ್ನುವ ತಪ್ಪು ನಿಲುವಿಗೆ ಅವರು ಬಂದಿದ್ದರು ಅದರ ಫಲವಾಗಿ ರಾಜಕೀಯವಾದ ಕೆಲ ಅಧಿಕಾರಗಳು ರಾಜ್ಯದ ತೆಕ್ಕೆಗೆ ಬಂದರೂ ಆರ್ಥಿಕ ಸಂಪನ್ಮೂಲದ ಎಲ್ಲ ಹಿಡಿತವನ್ನು ಕೇಂದ್ರವು ತನ್ನ ತೆಕ್ಕೆಯಲ್ಲೇ ಉಳಿಸಿಕೊಂಡಿತು. ಅಷ್ಟೇ ಅಲ್ಲದೇ ಸಂವಿಧಾನದಲ್ಲಿದ್ದ ಕಾನೂನು ರಚಿಸುವ ಮೂರರಲ್ಲಿ ಎರಡು ಭಾಗ ಅಂಶಗಳ ಮೇಲೆ ನೇರವಾಗಿ ಇಲ್ಲವೇ ಪರೋಕ್ಷವಾಗಿ ಕೇಂದ್ರ ತನ್ನ ಹಿಡಿತ ಬಿಗಿ ಮಾಡಿಕೊಳ್ಳುವ ಮೂಲಕ ರಾಜ್ಯಗಳು ಕೇಂದ್ರದ ಅಡಿಯಾಳಾಗುವಂತೆ ಮಾಡಿತು. ಈ ಮನಸ್ಥಿತಿ ಇವತ್ತಿನವರೆಗೂ ಮುಂದುವರೆದಿರುವುದನ್ನು ನಾವು ಕಾಣುತ್ತೇವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಬಲವಾದ ಕೇಂದ್ರದ ಪ್ರತಿಪಾದಕರೇ ಆಗಿರುವುದು ಮತ್ತು ಅವರೇ ಕರ್ನಾಟಕವನ್ನು ಆಳುತ್ತಿರುವುದು ಒಂದರ್ಥದಲ್ಲಿ ಸರಿಯಾದ ಒಕ್ಕೂಟ ವ್ಯವಸ್ಥೆಯ ಪರವಾಗಿ ಕರ್ನಾಟಕ ದನಿ ಎತ್ತದಂತೆ ಮಾಡಿದೆ. ಇಂತಹ ಜನರಿಂದ ದೂರವಾದ ಪಿರಮಿಡ್ ಮಾದರಿಯ ವ್ಯವಸ್ಥೆಯ ನೇರ ಪರಿಣಾಮವಾಗಿ ಒಕ್ಕೂಟ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ರಾಜ್ಯಗಳಿಗೆ ಬೇಕಿದ್ದ ಸ್ವಾಯತ್ತತೆ ಇಲ್ಲದೇ ಆಡಳಿತ ಅನ್ನುವುದು ಭ್ರಷ್ಟಾಚಾರದ, ಗೊಂದಲದ ಗೂಡಾಗಿ ಪರಿಣಮಿಸಿದೆ. ಸಂಪನ್ಮೂಲದ ಕೊರತೆಯಿಂದ ಬಳಲುತ್ತಿರುವ ರಾಜ್ಯಗಳು ತನ್ನ ರಾಜ್ಯದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕೇಂದ್ರ ಸರ್ಕಾರದ ಪಾಲುದಾರರಾಗುವುದೇ ಹಾದಿ ಎಂಬಂತಹ ಸನ್ನಿವೇಶದ ಕಾರಣದಿಂದಾಗಿ ಇತ್ತೀಚಿನ ದಶಕಗಳಲ್ಲಿ ದೇಶದ ಹಲವೆಡೆ ಪ್ರಾದೇಶಿಕ ಪಕ್ಷಗಳು ಹುಟ್ಟುವುದಕ್ಕೆ ಕಾರಣವಾಗಿವೆ ಹಾಗೂ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳೇ ಆಡಳಿತ ನಡೆಸುವ ಮಾದರಿ ಅಸ್ತಿತ್ವಕ್ಕೆ ಬಂದಿದೆ. ಇಂತಹ ಸನ್ನಿವೇಶದಲ್ಲಿ ರಾಷ್ಟ್ರೀಯ ಪಕ್ಷಗಳೇ ಸತತವಾಗಿ ಆಡಳಿತ ನಡೆಸುತ್ತಿರುವ ಕರ್ನಾಟಕ ರಾಜ್ಯವೂ ಕೇಂದ್ರದ ಸತತ ಕಡೆಗಣನೆಗೆ ಒಳಗಾಗಿದೆ. ಪರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿರುವ ರೈಲು, ರಸ್ತೆ ಸೌಕರ್ಯಗಳು, ಬೇರೆ ಬೇರೆ ಯೋಜನೆಗಳಿಗೆ ಕೇಂದ್ರದಿಂದ ಪಡೆಯುತ್ತಿರುವ ಅನುದಾನವನ್ನು ಗಮನಿಸಿದಾಗ ಈ ಮಾತಿಗೆ ಇನ್ನಷ್ಟು ಬಲ ಸಿಗುತ್ತದೆ. ಹೀಗಿರುವಾಗ ಸರಿಯಾದ ಒಕ್ಕೂಟ ವ್ಯವಸ್ಥೆ ರೂಪುಗೊಳ್ಳುವುದು ಎಷ್ಟು ಮುಖ್ಯವೋ ಅಲ್ಲಿಯವರೆಗೂ ಇರುವ ವ್ಯವಸ್ಥೆಯಲ್ಲಿ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಹಿತಾಸಕ್ತಿಗಳನ್ನು ಉಳಿಸಿಕೊಳ್ಳಲು ಕರ್ನಾಟಕದಲ್ಲಿ ಕನ್ನಡ ಕೇಂದ್ರಿತ ಪ್ರಾದೇಶಿಕ ರಾಜಕೀಯ ಚಿಂತನೆಯೊಂದು ಉದಯಿಸುವುದು ಈ ಹೊತ್ತಿನಲ್ಲಿ ಅತ್ಯಂತ ಮಹತ್ವದ್ದಾಗಿದೆ.

ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುವ, ಕನ್ನಡಿಗರ ಏಳಿಗೆಯ ಕನಸು ಕಾಣುವ, ಕನ್ನಡ-ಕನ್ನಡಿಗ-ಕರ್ನಾಟಕಗಳನ್ನು ಕೇಂದ್ರವಾಗಿಟ್ಟುಕೊಂಡ ಸಿದ್ಧಾಂತ ಹೊಂದಿರುವ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಚ್ಚಳಿಯದ ನಂಬಿಕೆ ಹೊಂದಿರುವ ಪ್ರಾದೇಶಿಕ ಚಿಂತನೆಯೇ ಕರ್ನಾಟಕದ ಪಾಲಿಗೆ ಸರಿಯಾದ ರಾಜಕೀಯ ಚಿಂತನೆ. ಇದೇ ನಮ್ಮ ನಾಡನ್ನು ದಿಲ್ಲಿಯಲ್ಲಿ ಯೋಗ್ಯವಾಗಿ ಪ್ರತಿನಿಧಿಸಬಲ್ಲ ಮಾದರಿ. ಆದರೆ ಇಂತಹ ಮಾದರಿಯ ರಾಜಕೀಯ ಚಿಂತನೆಗೆ ಇಡೀ ಭಾರತ ಒಕ್ಕೂಟವನ್ನು ಮುನ್ನಡೆಸುವ ಸಾಮರ್ಥ್ಯ ಇರಲು ಸಾಧ್ಯವೇ? ಹಣಕಾಸು ನೀತಿ ಬಗ್ಗೆ, ರಕ್ಷಣೆಯ ಬಗ್ಗೆ, ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಇವುಗಳು ಇಡೀ ಭಾರತವನ್ನು ಒಳಗೊಳ್ಳುವಂಥಾ ದಾರಿತೋರುಕ ಸೂತ್ರ ನೀಡಲು/ ಹೊಂದಿರಲು ಸಾಧ್ಯವೇ? ಅನ್ನುವುದೇ ಎಲ್ಲರ ಮುಂದಿರುವ ಪ್ರಶ್ನೆ. ಇದು ಸಾಧ್ಯ ಮತ್ತು ಇಂದು ಇವುಗಳಿಂದಲೇ ಮತ್ತಷ್ಟು ಪರಿಣಾಮಕಾರಿ ಪರಿಹಾರ/ ನೀತಿ ನಿಲುವು ಸಾಧ್ಯ ಅನ್ನುವುದೇ ಈ ಪ್ರಶ್ನೆಗಳಿಗೆ ಉತ್ತರವಾಗಿದೆ. ತಾನು ಪ್ರತಿನಿಧಿಸುವ ನೆಲದ ಬಗ್ಗೆ ಸಹಜ ಕಾಳಜಿ ಹೊಂದಿರುವ ಅಂತಹ ಪ್ರಾದೇಶಿಕ ಪಕ್ಷಗಳು ಪ್ರತಿ ರಾಜ್ಯದಲ್ಲೂ ಹುಟ್ಟಿಕೊಳ್ಳಬೇಕು. ಹಾಗಾದ್ರೆ ಅವು ತಮ್ಮಲ್ಲೇ ಹೊಡೆದಾಡಿ ಸಾಯುತ್ತವೆ ಅಂದುಕೊಳ್ಳಬೇಡಿ. ಇಂತಹ ಸನ್ನಿವೇಶದಲ್ಲಿಯೇ ಪ್ರತಿ ರಾಜ್ಯಕ್ಕೂ ಅನ್ವಯವಾಗುವಂತಹ ಸಮಾನ ಗೌರವದ ಒಂದೇ ಮಾನದಂಡದ ರೀತಿನೀತಿಗಳನ್ನು ಇವು ಒಗ್ಗೂಡಿ ರೂಪಿಸಿಕೊಳ್ಳಲೇ ಬೇಕಾಗುತ್ತದೆ ಮತ್ತು ರೂಪಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ’ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿ ಒಂದೇಪಕ್ಷ ಇರುವುದು ಆ ರಾಜ್ಯಕ್ಕೆ ಒಳ್ಳೆಯದು, ಒಂದು ರಾಜ್ಯದ ಕೇಂದ್ರ ಮಂತ್ರಿ ತನ್ನ ರಾಜ್ಯಕ್ಕೆ ಹೆಚ್ಚು ಒಳ್ಳೆಯದು ಮಾಡ್ತಾನೆ’ ಅನ್ನೋ ಪಕ್ಷಪಾತ, ತಾರತಮ್ಯಗಳು ಅಳಿಯುತ್ತವೆ. ಇಂತಹ ಪಕ್ಷಗಳ ಒಂದು ಮೈತ್ರಿಯು ಭಾರತ ಒಕ್ಕೂಟದಲ್ಲಿ ತಲೆಯೆತ್ತಬೇಕು. ಯಾವ ಪ್ರದೇಶಕ್ಕೂ ನಾವು ಭಾರತ ಒಕ್ಕೂಟದಲ್ಲಿರುವುದರಿಂದ ಅನ್ಯಾಯವಾಗುತ್ತಿದೆ ಅನ್ನಿಸದೇ ಇರುವಂತಹ ನೀತಿಗಳು ರೂಪುಗೊಳ್ಳಬೇಕಿವೆ. ಇಂತಹ ಮೈತ್ರಿ ಪಕ್ಷಗಳು ಇಡೀ ಭಾರತ ಒಕ್ಕೂಟಕ್ಕೆ ಹೊಂದಿಕೆಯಾಗುವ ಆರ್ಥಿಕ ನೀತಿ, ರಕ್ಷಣಾ ನೀತಿ, ವಿದೇಶಾಂಗ ನೀತಿ, ಆಡಳಿತ ನೀತಿಗಳನ್ನು ರೂಪಿಸುತ್ತವೆ. ಯಾವ ಒಕ್ಕೂಟದಲ್ಲಿ ಸಂಖ್ಯಾಬಲದ ಮೇಲಾಟವಿರುವುದಿಲ್ಲವೋ, ಅತಿ ಚಿಕ್ಕ ರಾಜ್ಯಕ್ಕೂ ಅತಿ ದೊಡ್ಡ ರಾಜ್ಯಕ್ಕೂ ಸಮಾನವಾದ ಪ್ರಾತಿನಿಧ್ಯ, ಪ್ರಭಾವ ಇರಲು ಸಾಧ್ಯವೋ ಅಂತಹ ಒಕ್ಕೂಟ ವ್ಯವಸ್ಥೆಯನ್ನು ರೂಪಿಸಬಲ್ಲ ಶಕ್ತಿ ಇಂತಹ ಮೈತ್ರಿಕೂಟಕ್ಕಿರಬೇಕಾಗಿದೆ.

ಬಹುಭಾಷಾ ಬಹುಸಂಸ್ಕೃತಿಗಳ ರಾಜ್ಯಗಳಿಂದಾದ ಭಾರತದಂತಹ ದೇಶದ ವೈವಿಧ್ಯತೆಗಳನ್ನು, ಪ್ರಾದೇಶಿಕ ಆಶೋತ್ತರಗಳನ್ನು ಅರ್ಥ ಮಾಡಿಕೊಂಡರೆ ಈ ವೈವಿಧ್ಯತೆಗಳನ್ನು ನಿಜಕ್ಕೂ ಪ್ರತಿನಿಧಿಸುವ, ಈ ಪ್ರದೇಶಗಳ ಹಿತಕ್ಕಾಗಿ ತುಡಿಯುವ ರಾಜಕೀಯ ಚಿಂತನೆಯ ತಳಹದಿಯ ಮೇಲೇ ಸರಿಯಾದ ವ್ಯವಸ್ಥೆಗಳು ರೂಪುಗೊಳ್ಳಲು ಸಾಧ್ಯ ಎನ್ನುವುದು ಮನವರಿಕೆಯಾಗುತ್ತದೆ. ಮಹಾರಾಷ್ಟ್ರದ ಹಿತಕ್ಕಾಗಿ ಕಟಿಬದ್ಧವಾದ ಅಲ್ಲಿನ ಪ್ರಾದೇಶಿಕ ಪಕ್ಷ ಮತ್ತು ಕನ್ನಡಿಗರ ಹಿತಕ್ಕಾಗಿ ಬಡಿದಾಡುವ ಕರ್ನಾಟಕದ ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದಾಗಲೇ ಪರಸ್ಪರರಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ಸರಿಯಾದ ರಾಷ್ಟ್ರೀಯ ನೀತಿಯಂತಹ ಎಲ್ಲರೂ ಒಪ್ಪಬಹುದಾದ ಪರಿಹಾರ ಸೂತ್ರ ರೂಪಿಸಲು ಸಾಧ್ಯವಾಗಬಹುದಾಗಿದೆ. ಇಷ್ಟು ವರ್ಷ ಈ ಸಮಸ್ಯೆಗಳಿಂದ ಪಲಾಯನ ಮಾಡಿ ಚಾಪೆಯಡಿ ಹಾಕಿಕೊಂಡು ಕೂತ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಗಳ ಸಮಸ್ಯೆಗಳಾಗಲೀ, ರಾಷ್ಟ್ರೀಯ ಸಮಸ್ಯೆಗಳಾಗಲೀ ಪರಿಹಾರ ಕಾಣುವುದು ಅಸಾಧ್ಯವೇ ಅನ್ನಿಸುತ್ತದೆ.

ಒಕ್ಕೂಟ ವ್ಯವಸ್ಥೆಯಲ್ಲಿ ವಿಕೇಂದ್ರಿಕರಣ ದೆಹಲಿಯಿಂದ ಬೆಂಗಳೂರಿನವರೆಗೆ ಬಂದರೆ ಸಾಲದು. ಅದು ಅಲ್ಲಿಂದಲೂ ಹೊರಟು ಕರ್ನಾಟಕದ ಅತಿ ಚಿಕ್ಕ ಊರಿನ ಪಂಚಾಯಿತಿಯ ಮಟ್ಟದವರೆಗೂ ಹರಡಬೇಕು. ಆ ಮಟ್ಟದವರೆಗೆ ಪಂಚಾಯತಿ ರಾಜ್ ಸಂಸ್ಥೆಗೆ ಕಸುವು ತುಂಬುವಂತೆ ಅಧಿಕಾರ ವಿಕೇಂದ್ರಿಕರಣವಾಗಬೇಕು. ಅಂತಹ ಸಮಾನ ಗೌರವದ ವಿಕೇಂದ್ರಿಕರಣಗೊಂಡ ಒಕ್ಕೂಟವಾಗಿ ಭಾರತ ಗಣರಾಜ್ಯ ಮಾರ್ಪಡುವುದೇ ಭಾರತ ಒಕ್ಕೂಟದ ಏಳಿಗೆಯ ಏಕೈಕ ಮಾರ್ಗವಾಗಿದೆ.

ಮೇಲಕ್ಕೆ

ಭಾರತಕ್ಕೊಪ್ಪುವ ಭಾಷಾ ನೀತಿ

ಭಾರತವೆಂಬ ಭಾಷಾವಾರು ಪ್ರಾಂತ್ಯಗಳ ಒಕ್ಕೂಟಕ್ಕೆ ಯಾವುದೇ ರಾಷ್ಟ್ರ ಭಾಷೆಯನ್ನು ಸಂವಿಧಾನದಲ್ಲಿ ಬರೆಯಲಾಗಿಲ್ಲ. ಹೀಗಿದ್ದರೂ ಆಡಳಿತ ಭಾಷೆ ಅನ್ನುವ ಹೆಸರಿನಲ್ಲಿ ಕೇಂದ್ರ ಸರ್ಕಾರ ತನ್ನೆಲ್ಲ ಕಚೇರಿಗಳಲ್ಲಿ ಹಿಂದೀಯ ಕಡ್ಡಾಯ ಬಳಕೆ ಹೆಚ್ಚಿಸುವತ್ತ ಭಾಷಾ ನೀತಿ ರೂಪಿಸಿಕೊಂಡು ಕೆಲಸ ಮಾಡುತ್ತಿರುವುದು ಒಕ್ಕೂಟ ಧರ್ಮಕ್ಕೆ ವಿರುದ್ಧವಾದುದಾಗಿದೆ. ಎಲ್ಲ ಭಾಷೆಗಳಿಗೂ ಸಮಾನ ಗೌರವ, ಸ್ಥಾನಮಾನ ಕೊಟ್ಟು, ಎಲ್ಲ ಭಾಷಿಕರನ್ನೂ ಒಂದೆನ್ನುವಂತೆ ಕಾಣಬೇಕಾದ ಕೇಂದ್ರ ಸರ್ಕಾರವು ಕೇವಲ ಹಿಂದೀಯೊಂದರ ಪ್ರಚಾರಕ್ಕೆ, ಪ್ರಸಾರಕ್ಕೆ ತೆರಿಗೆದಾರರ ಹಣ ಬಳಸಿ ಹಿಂದಿ ಸಪ್ತಾಹದಂತಹ ಕಾರ್ಯಕ್ರಮ ನಡೆಸುತ್ತಿರುವುದು ನಿಜಕ್ಕೂ ಕಳವಳ ತರುವಂತದ್ದು. ಈಗಾಗಲೇ ಕರ್ನಾಟಕದ ಉದ್ದಗಲಕ್ಕೂ ಅಂಚೆ, ಬ್ಯಾಂಕು, ವಿಮೆ, ರೈಲ್ವೆ, ತೆರಿಗೆ ಹೀಗೆ ಹಲವಾರು ಕೇಂದ್ರ ಸರ್ಕಾರಿ ಕಛೇರಿಗಳ ಆಡಳಿತದಲ್ಲಿ ಕನ್ನಡ ಮಾಯವಾಗುತ್ತಿದ್ದು, ಆ ಜಾಗದಲ್ಲಿ ಇಲ್ಲಿನ ಜನರ ನುಡಿಯಲ್ಲದ ಹಿಂದಿಯನ್ನು ಹೇರುತ್ತಿರುವುದು ಕಂಡು ಬರುತ್ತಿದೆ. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರಿ ಉದ್ಯೋಗ ಬೇಕೆಂದರೆ ಹಿಂದಿ ಕಲಿತಿರಲೇಬೇಕು ಅನ್ನುವಂತಹ ನಿಯಮಗಳ ಮೂಲಕ ಅಲ್ಲಿ ಉದ್ಯೋಗ ಪಡೆಯುವ ವಿಷಯದಲ್ಲೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಇದೇ ವೇಗದಲ್ಲಿ ಹಿಂದಿಯ ಹೇರಿಕೆ ಮುಂದುವರೆದರೆ ಇನ್ನೊಂದು ಪೀಳಿಗೆಯ ಅವಧಿಯಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಆಡಳಿತದಲ್ಲಿ, ಮಾರುಕಟ್ಟೆಯಲ್ಲಿ ಸಿಗಬೇಕಾದ ಸ್ಥಾನ ಸಿಗದೇ ಕಣ್ಮರೆಯಾಗುವ ಸನ್ನಿವೇಶ ಬರಬಹುದು. ಆದ್ದರಿಂದ ಎಲ್ಲ ಭಾಷಿಕರಿಗೂ ಒಪ್ಪುವಂತಹ ಭಾಷಾ ನೀತಿಯೊಂದನ್ನು ರೂಪಿಸುವತ್ತ ಕೇಂದ್ರದ ಮೇಲೆ ಒತ್ತಡ ತರುವ ಹೊಣೆಗಾರಿಕೆ ಹಿಂದಿ ಮತ್ತು ಎಲ್ಲ ಹಿಂದಿಯೇತರ ರಾಜ್ಯಗಳ ಮೇಲಿದೆ. ಭಾರತ ಒಕ್ಕೂಟ ಒಂದಾಗಿ ಮುಂದುವರೆಯಲು ಇದು ಅತ್ಯಂತ ಅವಶ್ಯಕವೂ ಹೌದು.

ಮೇಲಕ್ಕೆ

ನಾಡಿನ ಏಳಿಗೆಗೆ ರಾಜಕೀಯ ವ್ಯವಸ್ಥೆ ಸರಿಹೋಗಬೇಕಿದೆ

ನಾಡೊಂದರ ಏಳಿಗೆಗೆ ಬೇಕಿರುವ ಕಲಿಕೆ, ದುಡಿಮೆಯ ವ್ಯವಸ್ಥೆಯನ್ನು ರೂಪಿಸುವ ಹೊಣೆ ಅಲ್ಲಿನ ರಾಜಕೀಯ ವ್ಯವಸ್ಥೆಯದ್ದಾಗಿದೆ. ಕರ್ನಾಟಕದ ರಾಜಕೀಯ ವ್ಯವಸ್ಥೆ ಇತ್ತಿಚಿನ ದಿನಗಳಲ್ಲಿ ರಾಜಕೀಯ ಮೇಲಾಟಗಳು, ಭ್ರಷ್ಟಾಚಾರ, ಆಡಳಿತ ಯಂತ್ರದ ಕುಸಿಯುವಿಕೆಯಂತಹ ಬಿಕ್ಕಟ್ಟುಗಳಿಂದಲೇ ಎಲ್ಲೆಡೆ ಕಾಣಿಸಿಕೊಳ್ಳುತ್ತಿದೆ. ಸಹಜವಾಗಿಯೇ ಜನರಲ್ಲಿ ಇದು ಬೇಸರ, ನೋವು, ಹತಾಶೆಗೆ ಕಾರಣವಾಗಿದೆ. ರಾಜಕೀಯ ವ್ಯವಸ್ಥೆಯೇ ಕಳಪೆ, ರಾಜಕಾರಣಿಗಳೆಲ್ಲರೂ ಅಪ್ರಾಮಾಣಿಕರು ಅನ್ನುವ ಸಿನಿಕತನ ಹೆಚ್ಚಿನ ಜನರನ್ನು ಮುತ್ತಿಕೊಂಡಿದೆ. ಆದರೆ ಈ ಸಮಸ್ಯೆಗೆ ಸಿನಿಕತನ ಪರಿಹಾರವಲ್ಲ. ಈ ವ್ಯವಸ್ಥೆಯನ್ನು ಸರಿ ಮಾಡಲು ಸಮರ್ಥರು, ಯೋಗ್ಯರು ರಾಜಕೀಯ ವ್ಯವಸ್ಥೆಯ ಒಳ ಬಂದು ಒಳಗಿನಿಂದಲೇ ಇದನ್ನು ತಿದ್ದುವ, ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ. ಹಲವು ತೊಡಕುಗಳ ಮಧ್ಯೆಯೂ ಪ್ರಜಾಪ್ರಭುತ್ವ ವ್ಯವಸ್ಥೆ ಇತರ ಎಲ್ಲ ವ್ಯವಸ್ಥೆಗಳಿಗಿಂತಲೂ ಹೆಚ್ಚು ಸೂಕ್ತವೂ, ಸರಿಯಾದದ್ದೂ ಆಗಿದೆ. ಕನ್ನಡಿಗರು ರಾಜಕೀಯವೆಂದರೆ ಮೂಗು ಮುರಿಯದೇ ಇದರಲ್ಲಿ ಪಾಲ್ಗೊಳ್ಳಬೇಕು. ರಾಜಕೀಯ ಅಂದರೆ ಚುನಾವಣೆ ರಾಜಕೀಯವೊಂದೇ ಅಲ್ಲ, ಕಾನೂನು, ನೀತಿ ನಿಯಮಗಳ ಅಧ್ಯಯನ, ರೂಪಿಸುವಿಕೆ ಮುಂತಾದ ಪಬ್ಲಿಕ್ ಪಾಲಿಸಿ ನಿರ್ಧರಿಸುವ ಕೆಲಸದಿಂದ ಹಿಡಿದು ರಾಜಕೀಯ ಪಕ್ಷಗಳ ಮೇಲೆ ಸರಿಯಾದ ಕಾನೂನುಗಳನ್ನು ತರುವಂತೆ ಪ್ರಭಾವ ಬೀರುವ ಕೆಲಸದಿಂದ ಹಿಡಿದು, ವಿಷಯಗಳ ಬಗ್ಗೆ ಮಾಧ್ಯಮಗಳ ಮೂಲಕ ಅರಿವು ಮೂಡಿಸುವ ಕೆಲಸದವರೆಗೆ ಎಲ್ಲೆಲ್ಲಿ ವ್ಯವಸ್ಥೆಯಲ್ಲಿ ಬುಡಮಟ್ಟದಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಿಸಬಹುದೋ ಅವೆಲ್ಲವೂ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಹಾದಿಯೇ ಆಗಿವೆ. ಅಂತಹ ಪಾಲ್ಗೊಳ್ಳುವಿಕೆಯೊಂದೇ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವ ಹಾದಿಯಾಗಿದೆ.

ಮೇಲಕ್ಕೆ

ಏನ್ ಗುರು ಕಾಫಿ ಆಯ್ತಾ? ಬ್ಲಾಗ್