ಬನವಾಸಿ ಬಳಗ

ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಕನ್ನಡ ದೇಶಮಂ

ಮುಂಪುಟ

ಜಗತ್ತಿನ ಹಲವೆಡೆಗಳಲ್ಲಿ ನೆಲೆಸಿ, ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ವೃತ್ತಿಪರರು ಒಗ್ಗೂಡಿ ಕಟ್ಟಿಕೊಂಡಂತಹ ಸಂಘಟನೆ, ಬನವಾಸಿ ಬಳಗ. ಕನ್ನಡಿಗರ ಏಳಿಗೆಯಲ್ಲಿ ಮಹತ್ವದ ಪಾತ್ರವಹಿಸುವಂತಹ ವಿಷಯಗಳ ಸುತ್ತ ಸಮಗ್ರ ಚಿಂತನೆ ನಡೆಸುವುದು ಮತ್ತು ಚಿಂತನೆಗಳನ್ನು ಕನ್ನಡ ಸಮಾಜದ ಮುಂದಿರಿಸುವುದು ಬಳಗದ ಕೆಲಸಗಳಲ್ಲಿ ಬಹುಮುಖ್ಯವಾದುದಾಗಿದೆ. “ತಾಯ್ನುಡಿಯಲ್ಲಿ ಎಲ್ಲಾ ಹಂತದ ಕಲಿಕೆ ದೊರಕುವಂತಾಗುವುದು”, “ಕನ್ನಡ ನುಡಿಯರಿಮೆ”, “ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ”, “ಭಾರತದ ಒಕ್ಕೂಟ ವ್ಯವಸ್ಥೆ” ಮತ್ತು “ಭಾರತ ಒಕ್ಕೂಟಕ್ಕೊಪ್ಪುವ ಭಾಷಾನೀತಿ”, ಈ ವಿಷಯಗಳು ಬನವಾಸಿ ಬಳಗ ಕಂಡಂತೆ ಕನ್ನಡಿಗರ ಏಳಿಗೆಯ ಮೇಲೆ ಹೆಚ್ಚು ಪರಿಣಾಮಬೀರಬಲ್ಲವಾಗಿವೆ. ಈ ವಿಷಯಗಳ ಸುತ್ತ ಹುಟ್ಟಿದ ಚಿಂತನೆಗಳನ್ನು ಮಿಂಬಲೆ, ಪ್ರಕಾಶನದಂತಹ ಮಾಧ್ಯಮಗಳ ಮೂಲಕ ಕನ್ನಡ ಸಮಾಜದ ಮುಂದಿರಿಸುವತ್ತ ಬನವಾಸಿ ಬಳಗವು ದುಡಿಯುತ್ತಿದೆ. ಅಲ್ಲದೇ, ಈ ನಿಟ್ಟಿನಲ್ಲಿ ಸಾಂಸ್ಥಿಕ ಸ್ವರೂಪದ ಬದಲಾವಣೆ ತರುವತ್ತ ಹಲವಾರು ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿದೆ.ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಯಾವುದೇ ರೀತಿಯ ಚೌಕಾಸಿಯಿಲ್ಲದೆ ಕನಸುಕಂಡು, ಆ ಕನಸನ್ನು ಹೆಜ್ಜೆಹೆಜ್ಜೆಯಾಗಿ ನನಸಾಗಿಸುವತ್ತ ಕೆಲಸ ಮಾಡುತ್ತಿರುವ ವೃತ್ತಿಪರ ಯುವ ಕನ್ನಡಿಗರ ಬಳಗವೇ ಬನವಾಸಿ ಬಳಗ.

ಈ ತಾಣದಲ್ಲಿ, ಏಳಿಗೆ ಹೊಂದಿದ ನುಡಿ ಜನಾಂಗಗಳ ನಾಡು ಹೇಗಿದೆ? ಅಲ್ಲಿನ ವ್ಯವಸ್ಥೆಗೂ ನಮ್ಮ ವ್ಯವಸ್ಥೆಗೂ ಇರುವ ಅಂತರಗಳೇನು? ಕನ್ನಡ ಸಮಾಜ ಹೇಗಿದೆ, ಅದರ ಇವತ್ತಿನ ಸ್ವರೂಪವೆಂತದ್ದು? ಅದರ ಏಳಿಗೆಯ ಸವಾಲುಗಳೇನು, ಕಟ್ಟಿಕೊಳ್ಳಬೇಕಾದ ಸಾಮಾಜಿಕ, ರಾಜಕೀಯ, ಆರ್ಥಿಕ ವ್ಯವಸ್ಥೆಗಳು ಯಾವ ರೀತಿಯದ್ದಾಗಿರಬೇಕು ? ಕನ್ನಡವನ್ನು ಕೇವಲ ಭಾವುಕ ನೆಲೆಯಲ್ಲಿ ನೋಡದೇ ಅದು ಇಂದಿನ ಜಾಗತೀಕರಣದ ನಂತರದ ಸ್ಪರ್ಧಾತ್ಮಕ ಜಗತ್ತಿನ ಹೊಸ ಸವಾಲುಗಳನ್ನು ಎದುರಿಸುವಲ್ಲಿ ಪಡೆದುಕೊಳ್ಳಬೇಕಿರುವ ಶಕ್ತಿ ಎಂತಹದ್ದು?  ಕನ್ನಡಿಗರ ಬದುಕಿನ ಎಲ್ಲ ಅಗತ್ಯಗಳನ್ನು ಪೂರೈಸಬಲ್ಲಂತೆ ಅದಕ್ಕಿರುವ ಸಾಧ್ಯತೆಗಳನ್ನು ಹೆಚ್ಚಿಸುವತ್ತ ಆಗಬೇಕಿರುವ ಕೆಲಸಗಳೇನು ಅನ್ನುವ ಬಗ್ಗೆ ನಮ್ಮ ನಿಲುವುಗಳನ್ನು ನಿಮ್ಮ ಮುಂದಿರಿಸಿದ್ದೇವೆ.

“ತಾಯ್ನುಡಿಯಲ್ಲಿ ಕಲಿಕೆ”, “ಕನ್ನಡ ನುಡಿಯರಿಮೆ”, “ಸಮಾನ ಗೌರವದ ಒಕ್ಕೂಟ ವ್ಯವಸ್ಥೆ”, “ಭಾಷಾನೀತಿ”ಯಂತಹ ವಿಷಯಗಳ ಸುತ್ತ ಬನವಾಸಿ ಬಳಗ ಹಮ್ಮಿಕೊಂಡಿರುವ ಹಲವಾರು ಯೋಜನೆಗಳು ಮತ್ತು ಆ ಯೋಜನೆಗಳಲ್ಲಿ ಈವರೆಗಿನ ಹಲವು ಕೆಲಸಗಳ ವಿವರಗಳನ್ನು ಮತ್ತು ಬಳಗದ ಈ ಯೋಜನೆಗಳ ಬಗ್ಗೆ ಕರ್ನಾಟಕದ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಇಲ್ಲಿ ನಿಮ್ಮೊಡನೆ ಹಂಚಿಕೊಂಡಿದ್ದೇವೆ.

ಏನ್ ಗುರು ಕಾಫಿ ಆಯ್ತಾ? ಬ್ಲಾಗ್