ಬನವಾಸಿ ಬಳಗ

ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಕನ್ನಡ ದೇಶಮಂ

ನಾವು ಯಾರು

ಕನ್ನಡ ಕರ್ನಾಟಕ ಮತ್ತು ಕನ್ನಡಿಗರ ಹಿತವನ್ನು ಕೇಂದ್ರವಾಗಿಸಿಕೊಂಡು, ಈ ಹಿತವನ್ನು ಸಾಧಿಸಲು ಸಂಘಟಿತವಾಗಿ ದುಡಿಯುವ ಕಾಳಜಿಯಿಂದ ಶುರುವಾದ ಕನ್ನಡಪರ ಸಂಸ್ಥೆ ಬನವಾಸಿ ಬಳಗ. ಹಲವಾರು ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಯುವ ವೃತ್ತಿಪರರು ೨೦೦೫ರ ಹೊತ್ತಿಗೆ ಕನ್ನಡಪರವಾದ ಕೆಲಸವನ್ನು ಮಾಡಲು ಮುಂದಾಗಿ ೨೦೦೭ರ ಹೊತ್ತಿಗೆ ಬನವಾಸಿ ಬಳಗವು ಒಂದು ಕನ್ನಡಪರ ಕೆಲಸಗಳತ್ತ ತೊಡಗಿಸಿಕೊಂಡ ಸಂಸ್ಥೆಯಾಗಿ ಮಾರ್ಪಟ್ಟಿತ್ತು. ಕನ್ನಡಿಗರ ಮೊದಲ ಸಾಮ್ರಾಜ್ಯವಾದ ಕದಂಬರ ರಾಜಧಾನಿಯಾಗಿರುವ ಬನವಾಸಿಯ ಹೆಸರಿನಿಂದ ಬಳಗವನ್ನು ಆರಂಭಿಸಲಾಯಿತು. ಬಳಗದ ಘೋಷವಾಕ್ಯವೂ ಕೂಡಾ ಪಂಪನ ಮಾತುಗಳಿಂದ ಪ್ರೇರಿತವಾದ “ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಕನ್ನಡ ದೇಶಮಂ” ಎಂಬುದಾಗಿದೆ. ಬನವಾಸಿ ಬಳಗದ ಹಲವು ಸದಸ್ಯ ಗೆಳೆಯರುಗಳಿಗೆ ಪ್ರಪಂಚದ ನಾನಾ ದೇಶಗಳಿಗೆ ಭೇಟಿ ಕೊಡುವ, ಅಲ್ಲಿ ಕೆಲಕಾಲ ವಾಸವಿರುವ ಅವಕಾಶ ದೊರೆತಿದ್ದರಿಂದಾಗಿ ಹತ್ತಾರು ದೇಶಗಳ ಏರ್ಪಾಡುಗಳನ್ನು ನೋಡಿ ಅಧ್ಯಯನ ಮಾಡಲು ಸಾಧ್ಯವಾಗಿದೆ. ಜಗತ್ತಿನ ಮುಂದುವರೆದ ನಾಡುಗಳಿಂದ ನಾವು ಕಲಿಯಬಹುದಾದುದೇನು? ಎಂಬುದನ್ನೆಲ್ಲಾ ಅರಿಯಲು ಇದು ಅನುವು ಮಾಡಿಕೊಟ್ಟಿದೆ.

ಜಗತ್ತಿನ ಮುಂದುವರೆದ ದೇಶಗಳತ್ತ ಕಣ್ಣಾಡಿಸಿದಾಗ ನಮಗೆ ಕಾಣುವುದು, ಆ ನಾಡುಗಳ ಏಳಿಗೆಯ ಸೌಧವು ಭದ್ರವಾಗಿ ನಿಂತಿರುವುದು ನಾಲ್ಕು ಆಧಾರಸ್ತಂಭಗಳ ಮೇಲೆ ಎಂಬುದು. ಆ ನಾಲ್ಕು ಆಧಾರಸ್ತಂಭಗಳೇ ಕಲಿಕೆ, ದುಡಿಮೆ, ಛಲ ಮತ್ತು ಒಗ್ಗಟ್ಟುಗಳು. ಈ ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ನಾಡುಗಳಾಗಿ ಅವುಗಳು ನಮಗೆ ಕಾಣುತ್ತವೆ. ಇದೇ ಮಾನದಂಡದಿಂದ ಕನ್ನಡನಾಡಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ನಮಗೆ ಕನ್ನಡನಾಡು, ಕನ್ನಡ ಜನತೆ ಈ ನಾಲ್ಕು ಕ್ಷೇತ್ರಗಳಲ್ಲಿ ಸಾಧಿಸಬೇಕಾದ್ದು ಸಾಕಷ್ಟಿದೆ, ಸಾಗಬೇಕಾದ ದಾರಿಯೂ ಸಾಕಷ್ಟಿದೆ, ಎಂಬುದು ಕಂಡುಬರುತ್ತದೆ. ಇಂದಿನ ನಮ್ಮ ನಾಡಿನ ಪರಿಸ್ಥಿತಿಗೆ ಏನು ಕಾರಣ? ಈಗಿರುವ ಪರಿಸ್ಥಿತಿಯನ್ನು ಅಲ್ಲಗಳೆಯದೆ ಇದ್ದಲ್ಲಿಂದ ಮುಂದೆ ಸಾಗಬೇಕಾದರೆ ನಾವೇನು ಮಾಡಬೇಕು? ಈ ನಾಡಿನ ಏರ್ಪಾಟುಗಳಲ್ಲಿ ಏನೆಲ್ಲಾ ಸರಿಹೋಗಬೇಕಾಗಿದೆ? ಎಂಬ ಬಗ್ಗೆ ಆಳವಾದ ಚಿಂತನೆಗಳು ನಡೆಯಬೇಕಾಗಿವೆ.

ನಮ್ಮ ನಾಡಿನ ಏಳಿಗೆಗೆ ತೊಡಕಾಗಿರುವುದು ಅದು ಯಾವುದೇ ಆಗಿದ್ದರೂ ಅದನ್ನು ಗುರುತಿಸುವ, ಅದು ಬದಲಾಗಬೇಕೆನ್ನುವ ನಿಲುವಿನ ಚಿಂತನೆಯನ್ನು ಜನರ ಮುಂದಿಡುವ ಕೆಲಸದಲ್ಲಿ ಬನವಾಸಿ ಬಳಗ ತೊಡಗಿಕೊಂಡಿದೆ. ಈ ನಿಟ್ಟಿನಲ್ಲಿ ಬಳಗವು ಅಂತರ್ಜಾಲ ತಾಣಗಳಾದ ಫೇಸ್‌ಬುಕ್, ಟ್ವಿಟರ್, ಬ್ಲಾಗ್ ಮೊದಲಾದವುಗಳನ್ನು ಬಳಸಿಕೊಳ್ಳುತ್ತಿದೆ. ಇಂಟರ್ನೆಟ್ಟಿನಾಚೆಯೂ (ಮಿಂಬಲೆ) ಹಲವಾರು ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೆಲಸ ಮಾಡುತ್ತಿದೆ. ಬಹು ಭಾಷೆಗಳಿರುವ ಭಾರತ ಒಕ್ಕೂಟಕ್ಕೆ ಎಂತಹ ಭಾಷಾ ನೀತಿಯಿರಬೇಕು, ಆರ್ಥಿಕ ವ್ಯವಸ್ಥೆ ಯಾವ ಸ್ವರೂಪದ್ದಾಗಿರಬೇಕು, ಆಡಳಿತ ವ್ಯವಸ್ಥೆ ಯಾವ ತರಹದ್ದಾಗಿರಬೇಕು, ಮಾರುಕಟ್ಟೆ ಆಧಾರಿತ ವ್ಯವಸ್ಥೆಯ ಈ ದಿನಗಳಲ್ಲಿ ಕನ್ನಡವು ಸ್ಪರ್ಧೆಯಿಂದ ಹಿಂದೆ ಬೀಳದಿರಲು ಏನಾಗಬೇಕು, ಒಟ್ಟಾರೆ ಕನ್ನಡನಾಡಿನ ಜೊತೆ ರಾಜ್ಯಗಳ, ಕೇಂದ್ರಸರ್ಕಾರದ, ಹೊರದೇಶಗಳ ಸಂಬಂಧಗಳು ಇಂದು ಯಾವ ಸ್ವರೂಪದಲ್ಲಿವೆ ಮತ್ತು ಇದರ ಪರಿಣಾಮಗಳು ಏನಾಗಿವೆ? ಏನಾಗುತ್ತಿವೆ ಮತ್ತು ಏನಾಗಲಿವೆ ಎನ್ನುವುದನ್ನು ಕನ್ನಡದ ಕಣ್ಣಿನಿಂದ ನೋಡುವ ಮತ್ತು ಈ ನಿಟ್ಟಿನಲ್ಲಿ ಜನರನ್ನು ಜಾಗೃತಿಗೊಳಿಸುವ ಕಾಯಕದಲ್ಲಿ ಬಳಗ ತೊಡಗಿದೆ.

ಕನ್ನಡಿಗರ ಕಲಿಕೆ ಅತ್ಯುತ್ತಮವಾಗಬೇಕು. ಈ ನಾಡಿನ ಶಿಕ್ಷಣ ವ್ಯವಸ್ಥೆ ಜಗತ್ತಿನ ಯಾವುದೇ ಪರಿಣಾಮಕಾರಿ ವ್ಯವಸ್ಥೆಯ ಗುಣಮಟ್ಟಕ್ಕೆ ಸಾಟಿಯಾಗಬೇಕು. ಜಗದ ಎಲ್ಲಾ ಜ್ಞಾನ ವಿಜ್ಞಾನ ತಂತ್ರಜ್ಞಾನಗಳೂ ಕನ್ನಡಿಗರ ಕೈಗೆ ಸಲೀಸಾಗಿ ಎಟುಕುವಂತಾಗಬೇಕು. ಇಂತಹ ಅರಿವಿನಿಂದ ಕನ್ನಡಿಗರ ಕಲಿಕೆ ಅತ್ಯುತ್ತಮವಾಗಿ ನಾವೂ ಹೊಸದನ್ನು ಕಟ್ಟುವ ಬಲವನ್ನು ಬೆಳೆಸಿಕೊಳ್ಳುವಂತಾಗಬೇಕು. ಕನ್ನಡಿಗರ ದುಡಿಮೆ ಅತ್ಯುತ್ತಮವಾಗಬೇಕು. ಕನ್ನಡಿಗರಲ್ಲಿ ಉದ್ಯಮಶೀಲತೆ ಹೆಚ್ಚಬೇಕು. ಜಗತ್ತಿನ ಅತ್ಯುತ್ತಮವಾದ ಉತ್ಪನ್ನಗಳನ್ನು ತಯಾರಿಸುವ ಯೋಗ್ಯತೆ ನಮ್ಮದಾಗಬೇಕು, ಪ್ರತಿಕ್ಷೇತ್ರದಲ್ಲೂ ಪರಿಣಿತ ಕನ್ನಡಿಗರು ಇರುವ ದಿನಗಳು ನಮ್ಮದಾಗಬೇಕು. ದೇಶಕಾಲಗಳಲ್ಲಿ ಒಗ್ಗಟ್ಟು ನಮ್ಮ ನಡುವಿರಬೇಕು. ಇವನ್ನೆಲ್ಲಾ ಸಾಧಿಸಬೇಕೆಂಬ ಛಲ ನಮ್ಮಲ್ಲಿರಬೇಕು. ಹೀಗಾಗಲು ಏನೇನಾಗಬೇಕೋ ಅವೆಲ್ಲವನ್ನೂ ಮಾಡಲು ಕನ್ನಡಿಗರು ಮುಂದಾಗಬೇಕು. ಇದಕ್ಕೆ ಬೇಕಾಗುವ ಅಧ್ಯಯನ, ಯೋಜನೆ ಮತ್ತು ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. ಈ ಗುರಿಗಳತ್ತ ಹೆಜ್ಜೆ ಹೆಜ್ಜೆಯಾಗಿ ಸಾಗುವ ಕಡೆಗೆ ಬನವಾಸಿ ಬಳಗ ಗಮನವಿತ್ತಿದೆ. ಈ ದಿಕ್ಕಿನಲ್ಲಿ ಪ್ರಮುಖವಾಗಿ ಕಾಣುವ ಸವಾಲುಗಳಲ್ಲೊಂದು ದೊಡ್ಡ ಸವಾಲೆಂದರೆ, ತನ್ನತನದ ಅರಿವಿಲ್ಲದೆ ಮೈಮರೆತಿರುವ ಕನ್ನಡಿಗರನ್ನು ಎಚ್ಚರಿಸಬೇಕಾಗಿರುವುದು. ರಾಷ್ಟ್ರೀಯತೆಯ ತಪ್ಪು ಅರ್ಥೈಸುವಿಕೆಯಿಂದ, ಹುಸಿ ರಾಷ್ಟ್ರೀಯತೆಯ ದೊಡ್ಡ ಸವಾಲು ನಮ್ಮ  ಮುಂದಿದೆ. ನಮ್ಮತನವನ್ನು ಉಳಿಸಿ ಬೆಳೆಸಿಕೊಳ್ಳುತ್ತಲೇ ಹೇಗೆ ಭಾರತ ಒಕ್ಕೂಟವನ್ನು ಕಟ್ಟಿಕೊಳ್ಳಬೇಕು ಎನ್ನುವ ಬಗ್ಗೆ ಹೊಸ ತೆರನಾಗೇ ಚಿಂತಿಸಬೇಕಾಗಿದೆ.

ಈ ಎಲ್ಲದರ ಬಗ್ಗೆ ಬನವಾಸಿ ಬಳಗದಲ್ಲಿ ಚಿಂತನೆಗಳು, ಚರ್ಚೆಗಳು, ಯೋಜನೆಗಳು ನಡೆಯುತ್ತಲಿವೆ. ತನ್ನದೇ ಆದ ಪ್ರಕಾಶನ ಸಂಸ್ಥೆಯೊಂದನ್ನು ಆರಂಭಿಸುವ ಮೂಲಕ ಬಳಗವು ಜನರನ್ನು ತಲುಪುವ ಮತ್ತೊಂದು ಹಾದಿಗೆ ತೆರೆದುಕೊಂಡಿದೆ. ನಾಡಿನ ಜನರಲ್ಲಿ ಹೊಸ ಕನಸನ್ನು ಬಿತ್ತುವ, ನಾಡ ಏಳಿಗೆಗೆ ಬೇಕಿರುವ ವಿಷಯಗಳ ಬಗ್ಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸುವ, ಕನ್ನಡಿಗರ ಕಲಿಕೆ ದುಡಿಮೆಗಳನ್ನು ಅತ್ಯುತ್ತಮಗೊಳಿಸಲು ಶ್ರಮಿಸುತ್ತಿರುವ ಅನೇಕ ಸಂಸ್ಥೆಗಳೊಂದಿಗೆ ಒಡನಾಟವಿಟ್ಟುಕೊಂಡು ದುಡಿಯುವ ಮಹತ್ವದ ಸಂಸ್ಥೆಯಾಗಿ ಬೆಳೆಯುವತ್ತ ಬನವಾಸಿ ಬಳಗ ಮುನ್ನಡೆಯುತ್ತಿದೆ.

ಏನ್ ಗುರು ಕಾಫಿ ಆಯ್ತಾ? ಬ್ಲಾಗ್