ಡಬ್ಬಿಂಗ್ ಕನ್ನಡಕ್ಕೆ ಬರಬೇಕು ಎನ್ನುವ ದನಿಗಳು ಇದೀಗ ಬಲ ಪಡೆದುಕೊಳ್ಳುತ್ತಿದ್ದು ಜನಪರ ಸಂಘಟನೆಗಳು ಈ ನಿಲುವಿಗೆ ಸಹಮತ ತೋರುತ್ತಿರುವುದನ್ನು ನಾವು ಕಾಣಬಹುದು. ಡಬ್ಬಿಂಗ್ ಬರುವುದರಿಂದ ಕೆಲಸ ಕಳೆದುಕೊಳ್ಳುತ್ತೇವೆಂಬ ದಿಗಿಲಿನಿಂದ ನಲುಗುತ್ತಿರುವ ಚಿತ್ರರಂಗದ ಒಂದು ವರ್ಗ ಒಂದೆಡೆಯಾದರೆ ಕನ್ನಡ ಸಂಸ್ಕೃತಿಯ ಅಳಿವು ಡಬ್ಬಿಂಗ್‌ನಿಂದಾಗುತ್ತದೆ ಎನ್ನುವ ನಿಲುವಿನ ಕೆಲವು ಹಿರಿಯರು ಇನ್ನೊಂದೆಡೆ… ಇದು “ಡಬ್ಬಿಂಗ್ ಬೇಡ” ಎನ್ನುವ ಪಕ್ಷದೊಳಗಿನ ಪ್ರಮುಖ ಪಂಗಡಗಳು. ಡಬ್ಬಿಂಗ್ ಕೇವಲ ಫೇಸ್‌ಬುಕ್ಕಿಗರಿಗೆ ಬೇಕೆನ್ನೋ ಹಾದಿ ತಪ್ಪಿಸೋ ಮಾತಾಡ್ತಿರೋ ಚಿತ್ರರಂಗದವರು, ಯಾವ ಆಧಾರದ ಮೇಲೆ ಡಬ್ಬಿಂಗ್ ಆರು ಕೋಟಿ ಜನರಿಗೆಲ್ಲಾ ಬೇಡಾ ಎಂದು ಹೇಳುತ್ತಿದ್ದಾರೆ ತಿಳಿಯುತ್ತಿಲ್ಲ. ಫೇಸ್‌ಬುಕ್ಕಿನಲ್ಲಿ ಚರ್ಚೆ ಮಾಡುವವರು ನೂರಾರು ಜನರಿರಬಹುದು… ಪಿಟಿಷನ್‌ಗೆ ಸಾವಿರಾರು ಜನರು ಸಹಿ ಹಾಕಿರಬಹುದು, ಅಂತರ್ಜಾಲದಲ್ಲಿ ಡಬ್ ಆದ ಸತ್ಯಮೇವ ಜಯತೇ ನೋಡಿದ ಮೂವತ್ತು ಸಾವಿರ ಜನರಿರಬಹುದು ಅಥವಾ ಪತ್ರಿಕೆಗಳಿಗೆ ಪತ್ರ ಬರೆಯುತ್ತಿರುವ, ಕೆಲವೆಡೆಗಿನ ಮತದಾನಗಳಲ್ಲಿ ಡಬ್ಬಿಂಗ್ ಬೇಕೆಂದು ಮತನೀಡುತ್ತಿರುವ ಮತ್ತಷ್ಟು ಜನರಿರಬಹುದು, ಚಿತ್ರರಂಗದ ಒಳಗಿದ್ದೇ ಬಹಿರಂಗವಾಗಿ ದನಿಯೆತ್ತಿರುವ ಬೆರಳೆಣಿಕೆಯವರಿರಬಹುದು… ಈ ಎಲ್ಲಾ ಒಟ್ಟಾಗಿ ಪ್ರತಿನಿಧಿಸುತ್ತಿರುವುದು ಕನ್ನಡ ಜನತೆಯನ್ನೇ ಅಲ್ಲವೇ? ಸಮತಾ ಸೈನಿಕ ದಳವಾಗಲೀ, ಕರ್ನಾಟಕ ರಾಜ್ಯ ರೈತ ಸಂಘವಾಗಲೀ ಜನರನ್ನು ಪ್ರತಿನಿಧಿಸುತ್ತಿಲ್ಲವೇ? ಇವೆಲ್ಲಾ ಕಾಣುತ್ತಿದ್ದರೂ ಇವರಿಗೆ ಬಹುಷಃ ಕನ್ನಡಿಗರೆಲ್ಲಾ “ನಮಗೆ ಡಬ್ಬಿಂಗ್ ಬೇಕು” ಎಂದು ಬರೆದು ಕೇಳಿಕೊಳ್ಳಬೇಕೇನೋ…?! ಇಷ್ಟಕ್ಕೂ ಮಾರುಕಟ್ಟೆಯಲ್ಲಿ ಸಿನಿಮಾಗಳನ್ನು ಗೆಲ್ಲಿಸುವ ಅಥವಾ ಸೋಲಿಸುವ ಮೂಲಕ ನೀಡುವ ಉತ್ತರ ಸಾಲದೇ? ಡಬ್ ಆದವೂ ಕೂಡಾ ಇದೇ ಪ್ರಕ್ರಿಯೆಗೆ ಒಳಗಾಗುವ ಅವಕಾಶ ಇರಬೇಕಲ್ಲವೇ?

You must be logged in to post a comment.